
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರು ಪ್ರದೇಶದಲ್ಲಿ ಅ.02 ರಿಂದ ಅ.06 ರ ನಡುವೆ ಬೀಗ ಹಾಕಿದ್ದ ಮನೆಯಲ್ಲಿ ನಡೆದ ಸುಮಾರು ₹9.50 ಲಕ್ಷ ಮೌಲ್ಯದ 149 ಗ್ರಾಂ ಚಿನ್ನಾಭರಣಗಳ ಕಳವು ಪ್ರಕರಣದ ತನಿಖೆಯಲ್ಲಿ ಮಹತ್ವದ ಮುನ್ನಡೆಯಾಗಿದೆ. ಈ ಸಂಬಂಧ ವೇಣೂರು ಠಾಣೆಯಲ್ಲಿ ಅ.ಕ್ರ 85/2025 ಕಲಂ 331(1), 331(4), 305 ಬಿ.ಎನ್.ಎಸ್. 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಮುಂದುವರಿದಂತೆ, ಹೊರ ರಾಜ್ಯ ಮತ್ತು ವಿಭಿನ್ನ ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಮಂಗಳೂರು ಜೋಕಟ್ಟೆಯ ನಿವಾಸಿ ಅಬುಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್ (70) ಎಂಬ ಕುಖ್ಯಾತ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಯಿಂದ ₹5,65,000 ಮೌಲ್ಯದ 56.850 ಗ್ರಾಂ ಚಿನ್ನಾಭರಣಗಳು ಹಾಗೂ ಮಂಗಳೂರು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಕಳವುಗೊಳ್ಳಲಾದ ₹60,000 ಮೌಲ್ಯದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣ ಪತ್ತೆಯಲ್ಲಿ ಬೆಳ್ತಂಗಡಿ ಡಿವೈಎಸ್‌ಪಿ ಶ್ರೀಮತಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ ನೇತೃತ್ವದ ತಂಡವು ಶ್ರಮಿಸಿದೆ. ವೇಣೂರು ಠಾಣೆಯ ಪಿಎಸ್‌ಐ ಅಕ್ಷಯ್ ಡವಗಿ, ಓಮನ ಎನ್., ಎಎಸ್‌ಐ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಎಚ್.ಸಿ. ಕೃಷ್ಣ, ಧರ್ಮಸ್ಥಳ ಎಚ್.ಸಿ. ಪ್ರಶಾಂತ್, ಪಿ.ಸಿ. ಚರಣ್, ಬಸವರಾಜ್, ಮೋಹನ್, ಮಪಿಸಿ ಜಯಶ್ರೀ, ಪೂಂಜಾಲಕಟ್ಟೆ ಪಿ.ಸಿ. ರಜಿತ್ ಹಾಗೂ ಮಂಗಳೂರು ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ತಂಡದ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.






