ಮಾವೊವಾದಿ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ, ನಕ್ಸಲ್‌ ಮಿಲಿಟರಿ ಕಾರ್ಯಾಚರಣೆಗಳ ‘ಮಾಸ್ಟರ್‌ ಮೈಂಡ್‌’ ಎಂದೇ ಹೆಸರಾಗಿದ್ದ ಛತ್ತೀಸಗಢದ ಮಾಡವಿ ಹಿಡಮಾ (55) ಮತ್ತು ಆತನ ಪತ್ನಿ ಮದಕಂ ರಾಜೆ ಸೇರಿದಂತೆ ಆರು ನಕ್ಸಲರನ್ನು ಆಂಧ್ರಪ್ರದೇಶ ಪೊಲೀಸರು ಮಂಗಳವಾರ ಇಲ್ಲಿನ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಛತ್ತೀಸಗಢದಲ್ಲಿ ನಕ್ಸಲರ ವಿರುದ್ಧ ಆ‍ಪರೇಷನ್‌ ಬ್ಲ್ಯಾಕ್‌ ಫಾರೆಸ್ಟ್‌ (ಆಪರೇಷನ್‌ ಕಾಗರ್‌) ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ, ಮಾಡವಿ ಹಿಡಮಾ, ಪತ್ನಿ ಮತ್ತು ತನ್ನ ನಾಲ್ವರು ಭದ್ರತಾ ಸಿಬ್ಬಂದಿ ಜತೆಗೆ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಯೋಜನೆ ರೂಪಿಸಿದ್ದರು.

‘ಆಂಧ್ರಪ್ರದೇಶ-ಛತ್ತೀಸಗಢ-ಓಡಿಶಾ ಗಡಿಯಲ್ಲಿ ಇತ್ತೀಚೆಗೆ ನಕ್ಸಲರ ಓಡಾಟ ಹೆಚ್ಚಿದೆ ಎಂದು ಗುಪ್ತಚರ ಮಾಹಿತಿ ಲಭಿಸಿತ್ತು. ಮಂಗಳವಾರ ಮರೆಡುಮಿಲ್ಲಿ ಮಂಡಲದ ಅರಣ್ಯ ಪ್ರದೇಶದ ಮೂಲಕ ಹಿಡಮಾ ಮತ್ತು ತಂಡ ಆಂಧ್ರ ಪ್ರವೇಶಿಸುವ ಪ್ರಯತ್ನದಲ್ಲಿದ್ದಾಗ, ಎನ್‌ಕೌಂಟರ್‌ನಲ್ಲಿ ಅವರನ್ನು ಹತ್ಯೆ ಮಾಡಲಾಯಿತು’ ಎಂದು ಆಂಧ್ರಪ್ರದೇಶದ ಗುಪ್ತಚರ ವಿಭಾಗದ ಎಡಿಜಿಪಿ ಮಹೇಶ್‌ ಚಂದ್ರ ಲಡ್ಡಾ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಛತ್ತೀಸಗಢದ ಸುಕ್ಮಾ ಜಿಲ್ಲೆಯ ಪೂವರ್ತಿ ಗ್ರಾಮದ ಹಿಡಮಾ, ಎರಡು ದಶಕಗಳಿಂದೀಚೆಗೆ ದೇಶದಲ್ಲಿ ನಡೆದಿರುವ ಎಲ್ಲ ಪ್ರಮುಖ ನಕ್ಸಲ್‌ ದಾಳಿಗಳ ಹಿಂದಿನ ಸೂತ್ರಧಾರನಾಗಿದ್ದ. ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಬೆಟಾಲಿಯನ್-1ರ ಕಮಾಂಡರ್‌ ಆಗಿದ್ದ ಹಿಡಮಾನ ಭಾವಚಿತ್ರವನ್ನು ಇತ್ತೀಚೆಗೆ ಪೊಲೀಸರು ಬಿಡುಗಡೆ ಮಾಡುವವರೆಗೂ ಈತನ ರೂಪ ಮತ್ತು ವಯಸ್ಸು ನಿಗೂಢವಾಗಿಯೇ ಉಳಿದಿತ್ತು.

‘ಮರೆಡುಮಿಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ 6.30ರಿಂದ 7ರ ನಡುವೆ ಎನ್‌ಕೌಂಟರ್‌ ನಡೆದಿದೆ. ಹತ್ಯೆಯಾದವರಲ್ಲಿ ಇಬ್ಬರು ಮಹಿಳೆಯರು, ನಾಲ್ವರು ಪುರುಷರು ಸೇರಿದ್ದಾರೆ. ಕೆಲವರು ತಪ್ಪಿಸಿಕೊಂಡಿದ್ದಾರೆ’ ಎಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಬಾರ್ದರ್‌ ಹೇಳಿದ್ದಾರೆ.

ಹಿಡಮಾ, ಪತ್ನಿ ಮದಕಂ ರಾಜೆ ಜತೆಗೆ ಅವರ ಭದ್ರತಾ ಸಿಬ್ಬಂದಿ ದೇವಿ, ಲಕ್ಮಲ್‌ (ಚೈತು), ಮಲ್ಲ (ಮಲ್ಲಲು) ಮತ್ತು ಕಮಲು (ಕಮಲೇಶ್‌) ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ. ಹಿಡಮಾನ ಎನ್‌ಕೌಂಟರ್‌ನಿಂದ ಬಸ್ತಾರ್‌ ವಲಯದ ನಕ್ಸಲ್‌ ಚಳವಳಿಯ ಶವಪೆಟ್ಟಿಗೆ ಮೇಲೆ ಕೊನೆಯ ಮೊಳೆ ಹೊಡೆದಂತಾಗಿದೆ’ ಎಂದು ಛತ್ತೀಸಗಢ ಪೊಲೀಸರು ಹೇಳಿದ್ದಾರೆ.

ಎನ್‌ಕೌಂಟರ್‌ ನಡೆದ ಸ್ಥಳದಿಂದ ಎರಡು ಎಕೆ-47 ರೈಫಲ್‌, ಒಂದು ಪಿಸ್ತೂಲ್‌, ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!