ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನವೆಂಬರ್ 29 ಮತ್ತು 30ರಂದು ಜರುಗಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗೂ ಹಿಂದವೀ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಕಾರ್ಯಾಲಯವನ್ನು ನ.17ರಂದು ಬ್ರಹ್ಮರಥ ಮಂದಿರದ ಎದುರು ಉದ್ಘಾಟಿಸಲಾಯಿತು.

ದೇಶದಾದ್ಯಂತ ಕಾಲ್ನಡಿಗೆಯಲ್ಲಿ 35 ಸಾವಿರ ಕಿ.ಮೀ ಸಂಚರಿಸಿರುವ ‘ದೇಶಾಂತರಿ’ ಸೀತಾರಾಮ ಕೆದಿಲಾಯ ಅವರು ದೀಪ ಬೆಳಗಿಸಿ ಕಾರ್ಯಾಲಯ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, “ಭಾರತ ವಿಶ್ವಕ್ಕೆ ಬೆಳಕು ನೀಡಿದ ದೇಶ. ಯಾವುದೇ ಶುಭಕಾರ್ಯಕ್ಕೂ ಮುನ್ನ ದೀಪ ಪ್ರಜ್ವಲಿಸುವುದು ನಮ್ಮ ಸಂಸ್ಕೃತಿ. ಶ್ರೀನಿವಾಸ ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಭಾರತ ಮತ್ತೆ ವಿಶ್ವಗುರುವಾಗುವ ದಿನ ದೂರದಲ್ಲಿಲ್ಲ” ಎಂದು ಹೇಳಿದರು. ಛತ್ರಪತಿ ಶಿವಾಜಿಯ ಹಿಂದು ಸಾಮ್ರಾಜ್ಯದ ಕನಸನ್ನು ನೆನಪಿಸಿಕೊಂಡು, “ಮಹಾಲಿಂಗೇಶ್ವರನ ಅನುಗ್ರಹದಿಂದ ಈ ಉತ್ಸವ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ” ಎಂದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನರಸಿಂಹಪ್ರಸಾದ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ವೈದಿಕ ಸಮಿತಿ ಸಂಚಾಲಕ ಗುರುತಂತ್ರಿ ಮಾತನಾಡಿದರು.

“ಹಿಂದು ಸಮಾಜ, ಧರ್ಮವನ್ನು ಉಳಿಸುವಲ್ಲಿ ಜೊತೆಯಾಗಿ ಹೆಜ್ಜೆ ಇಡೋಣ”
ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, “ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ನಿಮಿತ್ತ ನಡೆಯುವ ಸಾಮೂಹಿಕ ವಿವಾಹ—ಎರೆಡು ಕೂಡಾ ಸಮಾಜದ ಏಕತೆಯನ್ನು ಬಲಪಡಿಸುವ ಕಾರ್ಯಕ್ರಮಗಳು. ಜಿಲ್ಲಾದ್ಯಂತದ ಹಿಂದು ಬಾಂಧವರು ಭಾಗವಹಿಸಬೇಕು,” ಎಂದು ಕರೆ ನೀಡಿದರು.
12 ಯತಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಹಿಂದವೀ ಸಾಮ್ರಾಜ್ಯೋತ್ಸವ ಸಭೆ ಹಿಂದು ಸಮಾಜಕ್ಕೆ ಹೊಸ ಚೈತನ್ಯ ತುಂಬಲಿದೆ ಎಂದರು.

ಸಮಿತಿ ಗೌರವಾಧ್ಯಕ್ಷ ಸಿದ್ದನಾಥ್ ಯಸ್‌ಕೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಸಂಚಾಲಕರು ಉಮೇಶ್ ಕೋಡಿಬೈಲು, ಪ್ರವೀಣ್ ಶೆಟ್ಟಿ ತಿಂಗಳಾಡಿ, ರಾಜು ಶೆಟ್ಟಿ, ನವೀನ್ ರೈ ಪಂಜಳ, ಅನಿಲ್ ತೆಂಕಿಲ, ಮನೀಶ್ ಕುಲಾಲ್, ಪ್ರೇಮ್‌ಾಜ್, ಪದ್ಮನಾಭ ಶೆಟ್ಟಿ, ಚಂದಪ್ಪ ಮೂಲ್ಯ, ಜಯಪ್ರಕಾಶ್ ಕಾಶಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಹ ಸಂಚಾಲಕ ರವಿ ಕುಮಾರ್ ರೈ ಕೆದಂಬಾಡಿಮಠ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!