ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಪರಿಸರದಲ್ಲಿ ನಿರ್ಮಿತವಾಗಿರುವ ಸಭಾಭವನದ ಬಗ್ಗೆ ಭಕ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ಮಂಗಳವಾರ ನಡೆದ ವಿಚಾರ–ಪ್ರಶ್ನಾ ಚಿಂತನೆ ಸಭೆಯಲ್ಲಿ ಸ್ಪಷ್ಟತೆ ದೊರೆತಿದೆ. ಸಭಾಭವನದ ಜಾಗವು ದೇವರಿಗೆ ಸಮರ್ಪಿತ ಸ್ಥಳವಾಗಿದ್ದು, ಪರಂಪರೆಯಿಂದಲೇ ಇಲ್ಲೇ ಕದಿರು ಕಟ್ಟುವ ವಿಧಿವಿಧಾನಗಳು ನಡೆಯುತ್ತಿದ್ದವು ಎಂಬ ಅಭಿಪ್ರಾಯ ಚಿಂತನೆಯಲ್ಲಿ ವ್ಯಕ್ತವಾಯಿತು.

ಸಭಾಭವನ ಉದ್ದೇಶಪೂರ್ತಿಗಾಗದೆ, ದೇವರಿಗೆ ‘ವಿಷ’ದ ಅನುಭವವಾಗುತ್ತಿದೆ ಎಂಬ ಸೂಚನೆ ಚಿಂತನೆಯಲ್ಲಿ ಹೊರಬಿದ್ದಿದ್ದು, ಈ ಜಾಗವನ್ನು ಪುನಃ ಗದ್ದೆಯಾಗಿ ಪರಿವರ್ತಿಸುವುದು ದೇವರ ಇಚ್ಛೆ ಎಂಬ ನಿಶ್ಚಯಕ್ಕೆ ಸಭೆ ತಲುಪಿದೆ.

ಕಾಪು ಮಾರಿಯಮ್ಮ ದೇವಸ್ಥಾನದ ಕುಮಾರ ಗುರು ತಂತ್ರಿ ಅವರ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ರಾಶಿ ಫಲಿತಾಂಶಗಳ ಮೂಲಕವೂ ಇದೇ ಸಂದೇಶ ದೃಢಪಟ್ಟಿತು.
— ಸಭಾಭವನ ಉಳಿಸಿಕೊಳ್ಳುವ ವಿಚಾರಕ್ಕೆ ವೃಶ್ಚಿಕ ಎಂಬ ‘ಆರೋಧ ರಾಶಿ’ ಬಂದಿದೆ.
— ಉಳಿದ ಜಾಗದಲ್ಲಿ ಅಭಿವೃದ್ಧಿ ಮಾಡುವ ವಿಚಾರಕ್ಕೂ ‘ನವೃತ್ತಿ’ ಅನುಕೂಲವಾಗಿಲ್ಲ.
— ದೇವಾಲಯದ ಮುಂಭಾಗದ ಸಂಪೂರ್ಣ ಜಾಗವನ್ನು ಗದ್ದೆಯಾಗಿ ಉಳಿಸುವ ಸಂಕಲ್ಪಕ್ಕೆ ಮಾತ್ರ ಮೇಷ ನವೃತ್ತಿಯಾಗಿ ಬಂದಿದೆ.

ಇದರಿಂದ ಸಭಾಭವನ ತೆರವುಗೊಳಿಸುವುದೇ ದೇವರ ತೃಪ್ತಿ ಎಂಬ ಸ್ಪಷ್ಟತೆ ಚಿಂತನೆ ಕಾರ್ಯಕ್ರಮದಲ್ಲಿ ಲಭ್ಯವಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, “ಸಭಾಭವನ ತೆರವು ಕುರಿತು ಎರಡು ಬಾರಿ ಪ್ರಶ್ನಾಚಿಂತನೆ ನಡೆಸಿದಾಗಲೂ ದೇವರು ಸಮಾಧಾನವಿಲ್ಲ ಎಂಬ ಸಂದೇಶವೇ ಬಂದಿತ್ತು. ಆದರೆ ಇಂದು ನಡೆದ ಚಿಂತನೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಸಭಾಭವನ ತೆರವುಗೊಳಿಸುವುದರಿಂದ ದೇವರಿಗೆ ತೃಪ್ತಿ ಸಿಗುತ್ತದೆ ಎಂಬ ನಿಶ್ಚಯ ಲಭ್ಯವಾಗಿದೆ. ಆದ್ದರಿಂದ ಸಭಾಭವನವನ್ನು ತೆರವು ಮಾಡಿ, ಮುಂದಿನ ದಿನಗಳಲ್ಲಿ ದೇವರಿಗೆ ಪ್ರಿಯವಾದ ಗದ್ದೆಯನ್ನು ಪುನರ್‌ ನಿರ್ಮಿಸಲು ತೀರ್ಮಾನಿಸಿದ್ದೇವೆ” ಎಂದರು.

ಅರ್ಜಿಕ ವಸಂತ ಕೆದಿಲಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಕುಮಾರ್, ಸುಭಾಷ್ ರೈ ಬೆಳ್ಳಪಾಡಿ, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ಎನ್.ಕೆ. ಜಗನ್ನಿವಾಸ ರಾವ್, ಕೇಶವ ಪ್ರಸಾದ್ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!