
ನವದೆಹಲಿ: ಬಾಬಾ ಸಿದ್ದಿಕಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ಯಾಂಗ್ಸ್ಟರ್ ಅನ್ಮೋಲ್ ಬಿಷ್ಣೋಯ್ ನನ್ನು ಅಮೆರಿಕ ಗಡಿಪಾರು ಮಾಡಿದ್ದು, ದೆಹಲಿಯಲ್ಲಿ ಎನ್ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಅನ್ಮೋಲ್ ಬಿಷ್ಣೋಯ್ನನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಬುಧವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಅನ್ಮೋಲ್ ಬಿಷ್ಣೋಯ್ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಕಿರಿಯ ಸಹೋದರನಾಗಿದ್ದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಬೇಕಾಗಿದ್ದ. ಸಿಧು ಮೂಸೆವಾಲಾ ಕೊಲೆ, ಬಾಬಾ ಸಿದ್ದಿಕಿ ಹತ್ಯೆ ಮತ್ತು ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ಮೋಲ್ ಬಿಷ್ಣೋಯ್ ಎಂದು ತಿಳಿದು ಬಂದಿದೆ.






