

ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಸಮೀಪ ನ.19ರಂದು ಮಧ್ಯಾಹ್ನ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕಡಬ ನಿವಾಸಿ ಸುನಿಲ್ ಅವರ ಪುತ್ರಿ ಅನನ್ಯಾ (21) ಎಂದು ಗುರುತಿಸಲಾಗಿದೆ. ಇನ್ನೋರ್ವ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ, ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ.
ಬಂಟ್ವಾಳ–ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಿಂದ ಎನ್.ಸಿ.ರೋಡ್‌ಗೆ ಸೇರಿಸುವ ದಾರಿಯಲ್ಲಿ ಇರುವ ತೀವ್ರ ತಿರುವು ಅಪಾಯಕಾರಿಯಾಗಿದ್ದು, ಈ ಭಾಗದಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿವೆ. ಬುಧವಾರ ಇಬ್ಬರು ವಿದ್ಯಾರ್ಥಿನಿಯರು ಬೆಳ್ತಂಗಡಿಯಿಂದ ಕಾಲೇಜಿಗೆ ತೆರಳುತ್ತಿದ್ದ ವೇಳೆ ತಿರುವಿನ ಬಳಿ ವ್ಯಾಗನಾರ್ ಕಾರು ಮತ್ತು ಹೊಂಡಾ ಆಕ್ಟಿವಾ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ.
ಘಟನೆ ಸ್ಥಳಕ್ಕೆ ಪುಂಜಾಲಕಟ್ಟೆ ಎಸ್‌ಐ ರಾಜೇಶ್ ಕೆ.ವಿ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





