
ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ–ಆಕೋಟತ್ತಡ್ಕ ಪ್ರದೇಶದಲ್ಲಿ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತ ಯುವಕನನ್ನು ಚೇತನ್ ಎಂದು ಗುರುತಿಸಲಾಗಿದೆ. ಅವರು ಪದವಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಮನೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪುತ್ತೂರಿನ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆ ದಿನ ಬೆಳಿಗ್ಗೆ ತಾಯಿ ಎಂ.ಬಿ. ಲಿಸಿ (59) ಅವರು ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದರು. ಮಧ್ಯಾಹ್ನ ಮಗನಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಕಾರ್ಮಿಕ ಲೋಕೇಶ್ ಆಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಮನೆಗೆ ತೆರಳಿ ಕೋಣೆಯೊಳಗೆ ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಕಂಡುಬಂದಿದ್ದಾನೆ ಎನ್ನಲಾಗಿದೆ.
ತಕ್ಷಣ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಚೇತನ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 34/2025, ಕಲಂ 194(3) ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಹಾಯ ಸಂದೇಶ (ಸಾರ್ವಜನಿಕ ಹಿತದೃಷ್ಟಿಯಿಂದ):
ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿರುವವರು ಸಹಾಯಕ್ಕಾಗಿ ಆಪ್ತರು, ವೈದ್ಯರು ಅಥವಾ ಸಹಾಯವಾಣಿ ಸಂಪರ್ಕಿಸಬಹುದು. ಭಾರತದಲ್ಲಿ ಆತ್ಮಹತ್ಯೆ ತಡೆ ರಾಷ್ಟ್ರೀಯ ಸಹಾಯವಾಣಿ: Aasra – 91-9820466726.






