
ಪುತ್ತೂರು: ನಿರಂತರ ಮಾನಸಿಕ ಕಿರುಕುಳ ಮತ್ತು ಪ್ರಾಣ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಪುತ್ತೂರಿನಲ್ಲಿ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ನಿವಾಸಿ ಹರೀಶ್ ಅವರು ಪುತ್ತೂರು ನಗರದ ಕಾಂಪ್ಲೆಕ್ಸ್ ಒಂದರಲ್ಲಿ ವಾಹನಗಳ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ನಡೆಸುತ್ತಿದ್ದ ಹೇಮಂತ್ ಆಚಾರ್ಯ ಎಂಬವರು ಕಳೆದ ಸುಮಾರು ಒಂದು ತಿಂಗಳಿನಿಂದ ವಿನಾಕಾರಣ ಬೈಯ್ದು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಆರೋಪಿ ಹಲ್ಲೆ ನಡೆಸಿ, ತಲ್ವಾರ ಹಿಡಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ಹರೀಶ್ ಅವರು ತಮ್ಮ ಪುತ್ರಿಗೆ ತಿಳಿಸಿದ್ದರು. ಇದರಿಂದ ಮಾನಸಿಕವಾಗಿ ನೊಂದ ಹರೀಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಗಳು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ. ಕ್ರ. 112/2025 ಕಲಂ 108 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಸಂಬಂಧ ಮೊದಲಿಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ (ಅಸ್ವಾಭಾವಿಕ ಮರಣ) ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಪುತ್ತೂರು ನಗರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






