
ಬೆಂಗಳೂರು :ನಗರದ ಹೆಸರುಘಟ್ಟ ರಸ್ತೆ ಸಮೀಪದ ಸೋಲದೇವನಹಳ್ಳಿ ಪ್ರದೇಶದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಹಾಸನ ಮೂಲದ ವತ್ಸಲಾ (19) ಮೃತಪಟ್ಟ ವಿದ್ಯಾರ್ಥಿನಿ ಎಂದು ಪೊಲೀಸರು ಗುರುತಿಸಿದ್ದಾರೆ.
ಬಿ.ಫಾರ್ಮ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ವತ್ಸಲಾ, ಬೆಂಗಳೂರಿನ ಪಿಜಿ ವಸತಿಗೃಹದಲ್ಲಿ ವಾಸಿಸುತ್ತಾ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ತನ್ನ ಕೊಠಡಿಯಲ್ಲಿ ಎಂಟು ಪುಟಗಳ ಡೆತ್ ನೋಟ್ ಬರೆದ ಬಳಿಕ, ಮಧ್ಯಾಹ್ನ ಸುಮಾರು 2.30ರ ವೇಳೆ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಡೆತ್ ನೋಟ್‌ನಲ್ಲಿ, “ಅಪ್ಪ, ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ. ನೀವು ಕೊಟ್ಟ ಪ್ರೀತಿ ಯಾರಿಂದಲೂ ಸಿಗುವುದಿಲ್ಲ. ನಿಮ್ಮ ಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ಮನಸ್ಸಿಲ್ಲ. ಹೀಗಾಗಿ ಸಾವೇ ನನ್ನ ಆಯ್ಕೆ,” ಎಂದು ಯುವತಿ ಬರೆದಿರುವುದು ಪತ್ತೆಯಾಗಿದೆ.
ಉನ್ನತ ವಿದ್ಯಾಭ್ಯಾಸದ ಕನಸುಗಳೊಂದಿಗೆ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಕಟಕ್ಕೊಳಗಾಗಿದ್ದಾರೆ.
ಘಟನೆಯ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.






