ಪುತ್ತೂರು: ನಗರಸಭೆಯ 2018ರ ಆಡಳಿತಾವಧಿಯಲ್ಲಿ ಕಸವಿಲೇವಾರಿ ಗುತ್ತಿಗೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ನಗರಸಭೆಯ ಕಡತಗಳನ್ನು ಪರಿಶೀಲಿಸಿದ್ದಾರೆ.

ನಗರಸಭೆಯ ಮಾಜಿ ಸದಸ್ಯ ಹೆಚ್. ಮಹಮ್ಮದ್ ಆಲಿ ಅವರು ನೀಡಿದ್ದ ದೂರು ಆಧರಿಸಿ, ಡಿಸೆಂಬರ್ 2ರಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ನಗರಸಭೆಗೆ ಭೇಟಿ ನೀಡಿ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಐದು ಲಾರಿಗಳ ನಕಲಿ ಬಿಲ್ಲು: ₹61.62 ಲಕ್ಷ ದುರುಪಯೋಗದ ಆರೋಪ
2018ರಲ್ಲಿ ಮನೆ-ಮನೆ ಕಸ ಸಂಗ್ರಹಣೆಗೆ ನಗರಸಭೆ ಒಟ್ಟು 7 ಲಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿತ್ತು. ಆದರೆ ವಾಸ್ತವದಲ್ಲಿ ಕೇವಲ 2 ವಾಹನಗಳನ್ನು ಮಾತ್ರ ಪುತ್ತೂರಿನಲ್ಲಿ ಬಳಸಲಾಗುತ್ತಿತ್ತು. ಉಳಿದ 5 ಲಾರಿಗಳ ಹೆಸರಲ್ಲಿ ಫೋರ್ಜರಿ ಬಿಲ್ಲುಗಳನ್ನು ಸೃಷ್ಟಿಸಿ ₹61,62,000 ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ದೂರುದಾರರ ಆರೋಪ.

ಇದಲ್ಲದೆ, ಸರ್ಕಾರದ ಆದೇಶದಂತೆ ವಾಹನಗಳಿಗೆ ಜಿಪಿಎಸ್ ಅಳವಡಿಸದೆ ನಗರಸಭೆಗೆ ನಷ್ಟ ಉಂಟುಮಾಡಲಾಗಿದೆ ಎಂದು ಮಹಮ್ಮದ್ ಆಲಿ ಸಲ್ಲಿಸಿದ ದೂರಿನಲ್ಲಿ ಉಲ್ಲೇಖವಿದೆ.

ಈ ಸಂಬಂಧ ಅವರು 2021ರ ಜನವರಿ 12ರಂದು ಭ್ರಷ್ಟಾಚಾರ ನಿಗ್ರಹ ದಳದ (ACB) ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಆಗಿನ ಪೌರಾಯುಕ್ತ ರೂಪಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ತಾತ್ಕಾಲಿಕ ಎರಡನೇ ದರ್ಜೆ ಸಹಾಯಕ ಅಸಾಕ್ ಎಸ್ ಹಾಗೂ ಲೆಕ್ಕಾಧಿಕಾರಿ ಚಂದ್ರರಾಮ ದೇವಾಡಿಗರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು.

ACB ರದ್ದಾದ ಬಳಿಕ ಲೋಕಾಯುಕ್ತ ಸಂಸ್ಥೆ ಪುನಃ ಕಾರ್ಯಾರಂಭ ಮಾಡಿದ ಹಿನ್ನೆಲೆಯಲ್ಲಿ, ಇದೀಗ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಮತ್ತು ಸಿಬ್ಬಂದಿಗಳು ಪುತ್ತೂರು ನಗರಸಭೆಯಲ್ಲಿ ದಾಖಲೆ ಪರಿಶೀಲಿಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

‘ಭ್ರಷ್ಟಾಚಾರ ಹೊರಬರುತ್ತಿದೆ’ – ಹೆಚ್. ಮಹಮ್ಮದ್ ಆಲಿ
ಈ ಕುರಿತು ಮಾತನಾಡಿದ ದೂರುದಾರ ಹೆಚ್. ಮಹಮ್ಮದ್ ಆಲಿ ಹೇಳಿದರು:

“2018ರಲ್ಲಿ ನಮ್ಮ ಆಡಳಿತದ ಅವಧಿಯಲ್ಲಿ 7 ಕಸವಿಲೇವಾರಿ ಲಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿತ್ತು. ಆದರೆ ಬಳಿಕ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ, ಪುತ್ತೂರಿನಲ್ಲಿ ಕೇವಲ 2 ವಾಹನಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಉಳಿದ 5 ವಾಹನಗಳನ್ನು ಮೂಡಬಿದ್ರೆ ನಗರಸಭೆ ಹಾಗೂ ಮೂಲ್ಕಿ ನಗರ ಪಂಚಾಯತ್ ತಮ್ಮ ತ್ಯಾಜ್ಯ ವಿಲೇವಾರಿಗಾಗಿ ಬಳಸಿಕೊಂಡಿದ್ದು, ಇದಕ್ಕೆ ಸಂಬಂಧಿತ ದಾಖಲೆಗಳೂ ಲಭ್ಯವಿವೆ.

ಆದರೂ, ಪುತ್ತೂರು ನಗರಸಭೆ ಎಲ್ಲ 7 ಲಾರಿಗಳಿಗೂ ಬಿಲ್ಲುಗಳನ್ನು ಸಿದ್ಧಪಡಿಸಿ ಹಣ ಪಾವತಿಸಿರುವುದು ನೇರ ದುರುಪಯೋಗ. ಇದೇ ವಿಷಯಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಈಗ ಕಡತ ಪರಿಶೀಲನೆ ಆರಂಭಿಸಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.

ಲೋಕಾಯುಕ್ತದ ಮುಂದಿನ ತನಿಖೆಯಿಂದ ಈ ಅಕ್ರಮದ ಪೂರ್ಣ ಸತ್ಯ ಹೊರಬರುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!