
ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ 75)ಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪ ಡಿಸೆಂಬರ್ 3ರಂದು ಸಂಜೆ ಸಂಭವಿಸಿದ ಕಾರು ಅಪಘಾತದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಕಾರು ಚಾಲಕ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಪುತ್ತೂರು ಕಬಕ ನಿವಾಸಿ ಸತೀಶ್ ರಾವ್, ಅವರ ಪತ್ನಿ ವೇದವಳ್ಳಿ, ಅವರ ಮೊಮ್ಮಗ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿ, ಹಾಗೂ ಪಡುಮಲೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಉದಯ ಕುಮಾರ್ ಪಡುಮಲೆ ಗಾಯಗೊಂಡಿದ್ದು, ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಪುತ್ತೂರಿಗೆ ಮರಳುತ್ತಿದ್ದ ವೇಳೆ, ಮೆಲ್ಕಾರ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಭಾರೀ ವೇಗದಲ್ಲಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಬಿ.ಸಿ.ರೋಡ್‌ನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಮಾನವೀಯತೆ ಮೆರೆದ ಕೃಷ್ಣಪ್ರಸಾದ್ ಆಳ್ವ
ಘಟನೆಯ ವೇಳೆ ಅದೇ ಮಾರ್ಗದಲ್ಲಿ ವಾಪಸ್ಸಾಗುತ್ತಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ತಕ್ಷಣ ನೆರವಿಗೆ ಧಾವಿಸಿ, ಗಾಯಾಳುಗಳನ್ನು ತನ್ನ ಇನ್ನೋವಾ ಕಾರಿನಲ್ಲಿ ಸ್ವತಃ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಮಾಡಲು ಸಹಕರಿಸಿದ ಅವರು, ಬಳಿಕ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕಳುಹಿಸಲು ಸಹಾಯ ಮಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೇರಾ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಬಾಬು ಮರಿಕೆ, ಮತ್ತು ಕಾರ್ಯದರ್ಶಿ ಬಾತೀಶ್ ಸಲ್ಮಾರ ಸಹಾಯದಲ್ಲಿ ರಕ್ಷಣೆ ಕಾರ್ಯ ನಡೆದಿದೆ.






