
ಕಡಬ: ಕಡಬ ತಾಲೂಕಿನ ಕೊಯಿಲ ನಿವಾಸಿ ಬಾಬು ಗೌಡ ಅವರ ದೂರಿನ ಮೇರೆಗೆ ತಡರಾತ್ರಿ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಾಜು ನಾಯ್ಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 3ರ ತಡರಾತ್ರಿ ಪಿರ್ಯಾದಿದಾರರ ತಮ್ಮ ಹರೀಶ ಅವರ ಮನೆಯಲ್ಲಿ ಜೋರಾದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಮನೆಯವರು ಪರಿಶೀಲಿಸಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿಯನ್ನು ಸ್ಥಳದಲ್ಲೇ ಹಿಡಿದಿದ್ದಾರೆ. ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಆತ ಮನೆಯ ಸದಸ್ಯ ಚೇತನ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳೀಯರು ಹಿಡಿದು ವಿಚಾರಿಸಿದಾಗ, ಸದರಿ ವ್ಯಕ್ತಿ ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಾಜು ನಾಯ್ಕರಾಗಿರುವುದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ಅಕ್ರಮ ಪ್ರವೇಶ ಹಾಗೂ ಹಲ್ಲೆ ಆರೋಪದ ಮೇಲೆ ಅ.ಕ್ರ 86/2025 ಪ್ರಕರಣವನ್ನು BNS–2023ರ ಕಲಂ 329(3), 115(2), 331(6) ಅಡಿಯಲ್ಲಿ ದಾಖಲಿಸಲಾಗಿದೆ.
ರಾಜು ನಾಯ್ಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಜೊತೆಗೆ, ಇಲಾಖಾ ಕ್ರಮವಾಗಿ ತಕ್ಷಣ ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






