
ಮಂಗಳೂರು : ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದ 14ನೇ ಆರೋಪಿ ರವಿ ಸಂಜಯ್ ಜಿ.ಎಸ್ ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವಿ ಸಂಜಯ್ ನನ್ನು ಪೊಲೀಸರು ಬಂಧಿಸಿದ್ದರು. ಇಂದು ನ್ಯಾಯಾಲಯ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
2 ಲಕ್ಷ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಜೊತೆ ಹಲವು ಷರತ್ತು ವಿಧಿಸಲಾಗಿದ್ದು, A14 ಆರೋಪಿಯು ಕೇಸ್ ಮುಗಿಯುವ ತನಕ ನಿರಂತರ ಕೋರ್ಟ್‌ಗೆ ಹಾಜರಾಗಬೇಕು, ಅಪರಾಧಗಳಲ್ಲಿ ಭಾಗಿಯಾಗಬಾರದು, ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು, ಮುಂದಿನ ಆದೇಶವರೆಗೆ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ವ್ಯಾಪ್ತಿಯಿಂದ ಹೊರಗೆ ತೆರಳಬಾರದು ಎಂಬ ಷರತ್ತು ವಿಧಿಸಲಾಗಿದೆ.
ಪ್ರಕರಣದ A7, A8, A9, A10, A12 ಮತ್ತು A13 ಆರೋಪಿಗಳ ಜಾಮೀನು ಅರ್ಜಿಯ ಆದೇಶ ನಾಳೆ ಹೊರಬರಲಿದೆ.
ಮೇ 27ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ರೆಹಮಾನ್ ಕೊಲೆ ನಡೆದಿತ್ತು. ಪೊಲೀಸರು ಒಟ್ಟು 14 ಆರೋಪಿಗಳನ್ನು ಬಂಧಿಸಿದ್ದರು.






