
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಿಂದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಡಿ.11ರ ರಾತ್ರಿ ನೆಕ್ಕಿಲಾಡಿಯಲ್ಲಿ ಸಂಭವಿಸಿದೆ.
ಬೈಕ್ ಸವಾರನಾಗಿದ್ದ ಮಠ ನಿವಾಸಿ ಬದ್ರುದ್ದೀನ್ ಅವರು ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್, ಉಪ್ಪಿನಂಗಡಿಯಿಂದ ನೆಕ್ಕಿಲಾಡಿ ಕಡೆಗೆ ರಾಂಗ್ ಸೈಡ್‌ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಕಾರು ಬೈಕ್‌ಗೆ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಬದ್ರುದ್ದೀನ್ ಅವರನ್ನು ಪ್ರಾಥಮಿಕ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.






