
ಸುಳ್ಯ, ಡಿ.12: ಮೈಸೂರಿನ ಮಳವಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪನಾಯ್ಕ ಅವರ ಪುತ್ರ ದೀಕ್ಷಿತ್ (25) ಮೃತ ಯುವಕ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ದೀಕ್ಷಿತ್ ಅವರು ಬೆಂಗಳೂರಿನಿಂದ ಕಂದಡ್ಕದ ಕಲ್ವಾರಿನ ತಮ್ಮ ಮನೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಮೈಸೂರು ಸಮೀಪದ ಮಳವಳ್ಳಿಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ದೀಕ್ಷಿತ್ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ, ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.






