
ಪ್ರೀತಿಸಿ (Love), ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯ ನಾಟಕವಾಡಿ ಮೋಸ ಮಾಡಿದ ಆರೋಪದ ಮೇಲೆ ಯುವಕನೊಬ್ಬನ ಅದ್ಧೂರಿ ಮದುವೆಯನ್ನು (Marriage) ಸಂತ್ರಸ್ತ ಯುವತಿ ನಿಲ್ಲಿಸಿದ ಅಚ್ಚರಿಯ ಘಟನೆ ರಾಯಚೂರು (Raichur) ನಗರದಲ್ಲಿ ನಡೆದಿದೆ.
ರಾಯಚೂರು ಮೂಲದ ಯುವಕ ರಿಷಬ್ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾಳೆ. ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಯುವಕ ರಿಷಬ್ ಹಾಗೂ ಸಂತ್ರಸ್ತೆಗೆ ಪರಸ್ಪರ ಪರಿಚಯವಾಗಿತ್ತು. ಕಾಲೇಜಿನಲ್ಲಿ ಡಿಗ್ರಿ ಓದುವಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆ ಬಳಿಕ ಯುವಕ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ನಂತರ ಮದುವೆಗೆಯಾಗೋದಾಗಿ ನಂಬಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಸಂತ್ರಸ್ತ ಯುವತಿ ರಿಷಬ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
ಯುವಕ ರಿಷಬ್ ಸಂತ್ರಸ್ತೆಯನ್ನ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಬಳಿಕ ಸಂತ್ರಸ್ತೆಯನ್ನ ಕಡೆಣಿಸಿ ಬೇರೊಬ್ಬ ಯುವತಿ ಜೊತೆ ಮದುವೆಗೆ ಸಜ್ಜಾಗಿದ್ದಾನೆ. ಈ ವಿಚಾರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಸಂತ್ರಸ್ತೆ ಗಮನಕ್ಕೆ ಬಂದಿದೆ.
ಇನ್ಸ್ಟಾಗ್ರಾಂನಲ್ಲಿ ಪ್ರಿಯಕರನ ಮದುವೆ ಆಮಂತ್ರಣ ನೋಡಿದ ಸಂತ್ರಸ್ತೆ ರಾಯಚೂರಿಗೆ ಓಡೋಡಿ ಬಂದಿದ್ದಾಳೆ. ಸದ್ಯ ಮದುವೆಗೆ ಮುರಿದು ಬಿದ್ದಿದ್ದು, ಯುವಕ ರಿಷಬ್ ವಿರುದ್ಧ ರಾಯಚೂರಿನ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.






