ಉಪ್ಪಿನಂಗಡಿ: ಜಾತಕ ನೋಡಿ ವಾಮಾಚಾರವಾಗಿದೆ ಎಂದು ನಂಬಿಸಿ ಯುವತಿಗೆ ಹಾಗೂ ಆಕೆಯ ಕುಟುಂಬಕ್ಕೆ ಕಿರುಕುಳ ನೀಡಿದ ಆರೋಪದ ಮೇಲೆ ಅರ್ಚಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕಜೆಯಲ್ಲಿ ನಡೆದಿದೆ.

ಮೂಲತಃ ಶಿರಸಿ ನಿವಾಸಿಯಾಗಿರುವ ಶಿವಗಿರಿ ಎಂಬ ಅರ್ಚಕನ ವಿರುದ್ಧ ಈ ದೂರು ದಾಖಲಾಗಿದೆ. ನರ್ಸಿಂಗ್ ಕಲಿಯುತ್ತಿರುವ ತುರ್ಕಜೆ ಗ್ರಾಮದ ಯುವತಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮನೆಯವರು ಸ್ಥಳೀಯ ದೇವಾಲಯಕ್ಕೆ ಹಾಲು–ಪಾಯಸ ಸೇವೆ ಸಲ್ಲಿಸಲು ಯುವತಿಯೊಂದಿಗೆ ತೆರಳಿದ್ದರು. ಈ ವೇಳೆ ಅರ್ಚಕ ಶಿವಗಿರಿ ಯುವತಿಯ ಜಾತಕ ನೋಡಿ “ವಾಮಾಚಾರವಾಗಿದೆ” ಎಂದು ಹೇಳಿ, ಅದನ್ನು ನಿವಾರಣೆಗೆ ಬೇಕಾದ ವಸ್ತುಗಳನ್ನು ತರಲು ಸೂಚಿಸಿದ್ದಾನೆ ಎನ್ನಲಾಗಿದೆ. ಕುಟುಂಬದವರು ಅವುಗಳನ್ನು ಒದಗಿಸಿದ ಬಳಿಕ ವಾಮಾಚಾರ ತೆಗೆದಿರುವುದಾಗಿ ಹೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ಬಳಿಕ ಆರೋಪಿ, ಯುವತಿಯ ಕುಟುಂಬದವರ ಬಳಿ “ನಾನು ನಿಮ್ಮ ಮಗಳನ್ನು ಇಷ್ಟಪಟ್ಟಿದ್ದೇನೆ, ನನಗೆ ಮದುವೆ ಮಾಡಿಕೊಡಿ” ಎಂದು ಒತ್ತಾಯಿಸಿದ್ದಾನೆ. ಆದರೆ ಕುಟುಂಬದವರು ಜಾತಿ ವ್ಯತ್ಯಾಸ ಕಾರಣದಿಂದ ಮದುವೆಗೆ ನಿರಾಕರಿಸಿದ್ದರೆನ್ನಲಾಗಿದೆ. ಈ ನಂತರ ಆರೋಪಿ ಯುವತಿ ವಾಸಿಸುತ್ತಿದ್ದ ಹಾಸ್ಟೆಲ್‌ಗೆ ತೆರಳಿ ವಿಚಾರಿಸುವುದು, ಆಕೆಯ ಕುರಿತು ಇಲ್ಲಸಲ್ಲದ ಆರೋಪ ಮಾಡುವುದು ಸೇರಿದಂತೆ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ.

ಇದರ ನಡುವೆ ಒಂದು ರಾತ್ರಿ ಕುಟುಂಬದ ಕೊಟ್ಟಿಗೆಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯಕ್ಕೂ ಆರೋಪಿ ಸಂಬಂಧ ಹೊಂದಿರಬಹುದು ಎಂದು ಶಂಕಿಸಿ, ಕುಟುಂಬದವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ವಿರುದ್ಧ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ, ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದರು.

ಆದರೆ ನಂತರದ ದಿನಗಳಲ್ಲಿ ಮಧ್ಯರಾತ್ರಿ ಕೈಯಲ್ಲಿ ತಲವಾರು ಹಾಗೂ ಟಾರ್ಚ್ ಹಿಡಿದು ಆರೋಪಿಯೊಬ್ಬ ಮನೆ ಆವರಣದ ಹಟ್ಟಿಗೆ ನುಗ್ಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಹಟ್ಟಿಯಲ್ಲಿದ್ದ ದನಗಳು ತಡೆಯುತ್ತಿದ್ದಂತೆ ಪಕ್ಕದ ಕೋಣೆಗೆ ತೆರಳಿ ಕೆಲ ಸಮಯ ಉಳಿದು ಮರಳಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧಾರವಾಗಿ ಮತ್ತೆ ಪೊಲೀಸರು ಬಳಿ ದೂರು ನೀಡಲಾಗಿದ್ದು, ಆರೋಪಿ ವಾಮಾಚಾರ ನಡೆಸಲು ಹಾಗೂ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಆರೋಪಿಯನ್ನು ಸೇವೆಯಿಂದ ತೆರವುಗೊಳಿಸಲಾಗಿದೆ ಎನ್ನಲಾಗಿದೆ. ಯುವತಿ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಶಿವಗಿರಿಯನ್ನು ಶಿರಸಿಯಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಇದು ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣವಾಗಿರುವುದರಿಂದ ಬಂಧನದ ಅಗತ್ಯತೆ ಕುರಿತು ನ್ಯಾಯಾಲಯ ತನಿಖಾಧಿಕಾರಿಯನ್ನು ಪ್ರಶ್ನಿಸಿತು. ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!