
ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್‌ರು ವಶಕ್ಕೆ ಪಡೆದು, 810 ಗ್ರಾಂ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸ್ವಾಧೀನಪಡಿಸಿಕೊಂಡ ಘಟನೆ ಡಿ.13ರ ಸಂಜೆ ತುಂಬೆ ಗ್ರಾಮದ ಹನಮನಗರದ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ.
ಅಕ್ರಮವಾಗಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ (ಕಾ&ಸು) ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ನಿರ್ಜನ ಪ್ರದೇಶದಲ್ಲಿ KA-19-MN-3664 ಸಂಖ್ಯೆಯ ಕಾರು ಹಾಗೂ KA-19-AE-0166 ಸಂಖ್ಯೆಯ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಲಾಯಿತು.
ವಿಚಾರಣೆಯಲ್ಲಿ ಅವರು ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) ಹಾಗೂ ಬಂಟ್ವಾಳ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಎಂದು ಗುರುತಿಸಲ್ಪಟ್ಟರು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ತಪಾಸಣೆ ವೇಳೆ ಕಾರಿನಲ್ಲಿ 450 ಗ್ರಾಂ ಹಾಗೂ ಆಟೋ ರಿಕ್ಷಾದಲ್ಲಿ 360 ಗ್ರಾಂ ಗಾಂಜಾ ಪತ್ತೆಯಾಗಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಗಾಂಜಾ ಸಹಿತ ಎರಡೂ ವಾಹನಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 183/2025 ಕಲಂ 8(C), 20(B)(ii)(a) ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






