
ಮಂಗಳೂರು, ಡಿ.13: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಚಲಾಯಿಸಲು ಅವಕಾಶ ನೀಡಿ ರಸ್ತೆ ಅಪಘಾತಕ್ಕೆ ಕಾರಣವಾದ ಪ್ರಕರಣದಲ್ಲಿ, ಸ್ಕೂಟರ್ ಮಾಲಕನಿಗೆ ನ್ಯಾಯಾಲಯವು ದಂಡ ವಿಧಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ 2025ರ ಮಾರ್ಚ್ 30ರಂದು ಮುಂಜಾನೆ 3.50ರ ಸುಮಾರಿಗೆ ಅಪ್ರಾಪ್ತ ಬಾಲಕ ಸ್ಕೂಟರ್ ಚಲಾಯಿಸುತ್ತಿದ್ದಾಗ, ಅದೇ ದಿಕ್ಕಿನಲ್ಲಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಎರಡೂ ವಾಹನಗಳ ಸವಾರರು ಗಾಯಗೊಂಡಿದ್ದರು.
ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಎಸ್ಸೆ ರೋಸಮ್ಮ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ಅವರು, ಅಪ್ರಾಪ್ತನಿಗೆ ಸ್ಕೂಟರ್ ನೀಡಿದ್ದ ಮಾಲಕ ಅಬ್ದುಲ್ ಹಮೀದ್ ಅವರಿಗೆ ₹25,000 ದಂಡ ವಿಧಿಸಿ ಆದೇಶಿಸಿದ್ದಾರೆ.






