
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಪ್ರದೇಶದಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮುಕ್ಕ, ಸಸಿಹಿತ್ಲು ರಸ್ತೆ ನಿವಾಸಿ ಶ್ರೀಮತಿ ಜಲಜ (85) ಅವರು ನೀಡಿದ ದೂರಿನಂತೆ, ಡಿ.3ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಅಪರಿಚಿತರು ನೀರು ಕೇಳುವ ನೆಪದಲ್ಲಿ ಮನೆ ಬಾಗಿಲು ಬಡಿದು, ಬಾಗಿಲು ತೆರೆಯದಿದ್ದಾಗ ಮನೆಯ ಹಂಚನ್ನು ತೆರೆದು ಒಳನುಗ್ಗಿದ್ದಾರೆ. ಬಳಿಕ ತುಳುವಿನಲ್ಲಿ ಜೀವ ಬೆದರಿಕೆ ಹಾಕಿ, ಗೋಡ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ ಹಾಗೂ ಪರ್ಸ್‌ನಲ್ಲಿದ್ದ ಸುಮಾರು ₹14,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2025, ಬಿ.ಎನ್.ಎಸ್ ಕಲಂ 309(6)ರಡಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ (21), ಸುರತ್ಕಲ್ ನಿವಾಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜೈಸನ್ @ ಲೆನ್ಸನ್ ಕಾರ್ಕಳ ಎಂಬಾತನೊಂದಿಗೆ ಕೃತ್ಯ ಎಸಗಿರುವುದಾಗಿ ಹಾಗೂ ದೋಚಿದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿಯ ಹೇಳಿಕೆಯ ಮೇರೆಗೆ ಬೆಂಗಳೂರಿಗೆ ತೆರಳಿದ ಪೊಲೀಸರು ವಿನೋದ್ @ ಕೋತಿ @ ವಿನೋದ್ ಕುಮಾರ್ (33) ಹಾಗೂ ಗಿರೀಶ್ @ ಸೈಕಲ್ ಗಿರಿ (28) ಎಂಬವರನ್ನು ಡಿ.14ರಂದು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹4.43 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್‌ಗಳು ಹಾಗೂ ₹3,000 ನಗದನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಜೈಸನ್ @ ಲೆನ್ಸನ್ ಕಾರ್ಕಳ ತಲೆಮರೆಸಿಕೊಂಡಿದ್ದಾನೆ.
ಬಂಧಿತ ಶೈನ್ ಎಚ್. ಪುತ್ರನ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದ್ದು, ವಿನೋದ್ ಕುಮಾರ್ ಹಾಗೂ ಗಿರೀಶ್ ಮೇಲೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಡಿ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ನೇತೃತ್ವದಲ್ಲಿ ಪಿಎಸ್‌ಐ ರಘುನಾಯಕ್, ರಾಘವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಗಳ ತಂಡದಿಂದ ನಡೆದಿದೆ.






