ಮಂಗಳೂರು, ಡಿ.16: ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್ (KA-19-ER-7755) ಮೋಟಾರ್‌ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ, ಕದ್ರಿ ಪೊಲೀಸರು ಅಂತರ್‌ರಾಜ್ಯ ಸರಗಳ್ಳತನದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಡಿಸೆಂಬರ್ 12ರಂದು ನಡೆದ ಬೈಕ್ ಕಳವು ಕುರಿತು ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಡಿಸೆಂಬರ್ 16ರಂದು ಪ್ರಮುಖ ಆರೋಪಿಗಳಾದ ಪೈಸಲ್ @ ತೋಟ ಪೈಸಲ್ (ಉಳ್ಳಾಲ) ಹಾಗೂ ನಿತೀನ್ ಕುಮಾರ್ (ಮೈಸೂರು)ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಡಿಸೆಂಬರ್ 13ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ಡಿ ಹಿತ್ಲು ಬೆಳಕೆ ಪ್ರದೇಶದಲ್ಲಿ 70 ವರ್ಷದ ಹೊನ್ನಮ್ಮ ಮಹಾದೇವ ನಾಯ್ಕ ಅವರ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಅಂದಾಜು ರೂ.1.20 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ರೂ.45 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಪೈಸಲ್ @ ತೋಟ ಪೈಸಲ್ ವಿರುದ್ಧ ಉಡುಪಿ, ಕಾರ್ಕಳ, ಮಣಿಪಾಲ, ಮಂಗಳೂರು, ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ, ಪುತ್ತೂರು, ಶಿರ್ವ, ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿ (ಕುಶಾಲನಗರ) ಸೇರಿದಂತೆ ಕರ್ನಾಟಕ ಹಾಗೂ ಕೇರಳದ ವಿವಿಧ ಠಾಣೆಗಳಲ್ಲಿ ದರೋಡೆ, ಕಳ್ಳತನ, ಕೊಲೆ ಸೇರಿದಂತೆ ಸುಮಾರು 42 ಪ್ರಕರಣಗಳು ದಾಖಲಾಗಿವೆ. ವಿವಿಧ ನ್ಯಾಯಾಲಯಗಳಿಂದ 10ಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್‌ಗಳು ಬಾಕಿಯಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು ಎನ್ನಲಾಗಿದೆ.

ಕಾರ್ಯಾಚರಣೆಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಮನೋಹರ್ ಪ್ರಸಾದ್ ಸೇರಿದಂತೆ ಎಎಸ್‌ಐಗಳು, ಹೆಡ್‌ಕಾನ್ಸ್‌ಟೇಬಲ್‌ಗಳು, ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಾಗೂ ಕದ್ರಿ ಠಾಣೆಯ ಸಿಬ್ಬಂದಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!