ಮಂಗಳೂರು: ಪಾದಚಾರಿಗಳ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಪಾರ್ಕಿಂಗ್ ನಿಯಮ ಉಲ್ಲಂಘನೆಗಳ ವಿರುದ್ಧ ಮಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಜೂನ್ 2026ರಿಂದ ಈವರೆಗೆ ಒಟ್ಟು 7,490 ಪ್ರಕರಣಗಳನ್ನು ದಾಖಲಿಸಿ ₹3,07,600 ದಂಡ ವಸೂಲಿ ಮಾಡಿದ್ದಾರೆ.No Parking, Footpath Parking, Wrong Parking, Double Parking ಹಾಗೂ ಸಂಚಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ವಾಹನ ನಿಲುಗಡೆ ಸೇರಿದಂತೆ ವಿವಿಧ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 1,080 ಪ್ರಕರಣಗಳು ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿವೆ.ಇದೇ ವೇಳೆ ನಕಲಿ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಬಳಕೆ ಮತ್ತು ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವುದನ್ನು ತಡೆಗಟ್ಟಲು ಆ.4ರಿಂದ 12ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ 258 ವಾಹನಗಳ ವಿರುದ್ಧ ಹಾಗೂ ನಂಬರ್ ಪ್ಲೇಟ್ ಅಳವಡಿಸದೆ ಸಂಚರಿಸುತ್ತಿದ್ದ 74 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಒಟ್ಟು 332 ಪ್ರಕರಣಗಳಲ್ಲಿ ₹3,01,000 ದಂಡ ವಿಧಿಸಲಾಗಿದೆ.ವಾಹನಗಳಿಗೆ ನಿಗದಿಪಡಿಸಿದ ರೀತಿಯಲ್ಲಿ ಸ್ಪಷ್ಟವಾಗಿ ಹಾಗೂ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ವಾಹನ ಮಾಲೀಕರ ಜವಾಬ್ದಾರಿಯಾಗಿದೆ. ನಿಗದಿಪಡಿಸಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.ಸಂಚಾರ ನಿಯಮ ಉಲ್ಲಂಘನೆ ವಿರುದ್ಧದ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸುರಕ್ಷಿತ ಸಂಚಾರಕ್ಕೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!