ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಎಂಬಲ್ಲಿ ಪೊಲೀಸರು ದಾಳಿ ನಡೆಸಿ ನಿಷೇಧಿತ ಎಂ.ಡಿ.ಎಂ.ಎ ಹಾಗೂ ಗಾಂಜಾ ಸೇರಿದಂತೆ ₹4.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 12ರಂದು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ, ಐಪಿಎಸ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ದಾಳಿಯಲ್ಲಿ ₹2.25 ಲಕ್ಷ ಮೌಲ್ಯದ 22.57 ಗ್ರಾಂ ಎಂ.ಡಿ.ಎಂ.ಎ, 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ ಐದು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಡ್ಯಾರ್ ಮಂಗಳೂರು ನಿವಾಸಿ ನಾಶೀರ್ ಹುಸೇನ್ (37), ಗೋಳ್ತಮಜಲು ನಿವಾಸಿ ಮಹಮ್ಮದ್ ಜುನೈದ್ (38) ಹಾಗೂ ಕಂಕನಾಡಿ ಮಂಗಳೂರು ನಿವಾಸಿ ಮೊಹಮ್ಮದ್ ಅಫ್ರೀದಿ (24) ಅವರನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಪಿಎಸ್‌ಐ ರನ್ನ ಗೌಡ ಎಸ್. ಪಾಟೀಲ್, ಪ್ರೊಬೇಷನರಿ ಪಿಎಸ್‌ಐಗಳಾದ ಶಿವರಾಮ್, ಫಕೀರಪ್ಪ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಸಹಕರಿಸಿದ್ದರು.










