
ವಿಟ್ಲ: ಕೇಪು ದೇವಸ್ಥಾನ ಜಾತ್ರೋತ್ಸವದ ವೇಳೆ ಕೋಳಿ ಅಂಕಕ್ಕೆ ಪೊಲೀಸ್ ಅಡ್ಡಿ – ಶಾಸಕರ ಹಾಜರಿಯಲ್ಲಿ ನಡೆದ ಘಟನೆ
ವಿಟ್ಲ ಸಮೀಪದ ಕೇಪು ಗ್ರಾಮದ ಮಲರಾಯಿ–ಪಿಲಿಚಾಮುಂಡಿ ದೈವಸ್ಥಾನದ ಕೆಳಗಿನ ಗದ್ದೆಯಲ್ಲಿ ಜಾತ್ರೋತ್ಸವದ ಅಂಗವಾಗಿ ನಡೆಯುತ್ತಿದ್ದ ಕೋಳಿ ಅಂಕ ಕಾರ್ಯಕ್ರಮಕ್ಕೆ ಈ ವರ್ಷ ಪೊಲೀಸ್ ಇಲಾಖೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಜಾತ್ರೋತ್ಸವದ ಐದನೇ ದಿನದಿಂದ ಮೂರು ದಿನಗಳ ಕಾಲ ನಡೆಯುವ ಸಂಪ್ರದಾಯಿಕ ಕೋಳಿ ಅಂಕಕ್ಕೆ ಸಂಬಂಧಿಸಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ಅವರು ಸ್ಥಳದಲ್ಲೇ ನಿಂತು ಕೋಳಿ ಅಂಕ ಮುಂದುವರಿಯಲು ಅವಕಾಶ ಕಲ್ಪಿಸಿದರೆಂಬ ಆರೋಪ ದಾಖಲಾಗಿದೆ.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಯಾವುದೇ ಜೂಜಾಟ ನಡೆಯುವುದಿಲ್ಲ. ಜಾತ್ರೋತ್ಸವದ ಭಾಗವಾಗಿ ಪ್ರತೀ ವರ್ಷ ಸಂಪ್ರದಾಯದಂತೆ ಕೋಳಿ ಅಂಕ ಆಯೋಜಿಸಲಾಗುತ್ತಿದ್ದು, ಇದನ್ನು ಗ್ರಾಮಸ್ಥರು ಧಾರ್ಮಿಕ ಆಚರಣೆಯ ಭಾಗವೆಂದು ಪರಿಗಣಿಸುತ್ತಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.
ಈ ನಡುವೆ, ಅಕ್ರಮ ಕೋಳಿ ಅಂಕ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಡಿ.20ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಠಾಣಾ ಸಿಬ್ಬಂದಿಯೊಂದಿಗೆ ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ ಮುರಳೀಧರ ರೈ ಅವರ ಗದ್ದೆಗೆ ದಾಳಿ ನಡೆಸಿದರು. ಪರಿಶೀಲನೆಯ ವೇಳೆ ಹಲವು ಮಂದಿ ಕೋಳಿ ಅಂಕಕ್ಕೆ ಬಳಸುವ ಕೋಳಿಗಳನ್ನು ಹಿಡಿದುಕೊಂಡು ಗುಂಪುಗಟ್ಟಿರುವುದು ಕಂಡುಬಂದಿತು. ಈ ಸಂದರ್ಭ ಅಲ್ಲಿ ಸೇರಿದ್ದವರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ ಸೂಕ್ತ ಕಾನೂನು ಅರಿವು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಅದೇ ವೇಳೆ ಸ್ಥಳದಲ್ಲಿ ಹಾಜರಿದ್ದ ಪುತ್ತೂರು ಶಾಸಕರು, ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕ ಮುಂದುವರಿಸಲು ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದರು ಎಂಬ ಆರೋಪವಿದೆ. ಇದರಿಂದ ಸ್ಥಳದಲ್ಲಿದ್ದವರು ಕೋಳಿ ಅಂಕವನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಅಗತ್ಯ ಭದ್ರತೆ ಕೈಗೊಂಡು, ಕಾನೂನುಬಾಹಿರವಾಗಿ ಕೋಳಿ ಅಂಕದಲ್ಲಿ ತೊಡಗಿದ್ದ 16 ಜನರನ್ನು ವಶಕ್ಕೆ ಪಡೆದಿದ್ದು, 22 ಹುಂಜ ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿಗಳು)ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ, ಯಾವುದೇ ಪರವಾನಿಗೆ ಪಡೆಯದೆ ತಮ್ಮ ಜಾಗದಲ್ಲಿ ಕಾನೂನುಬಾಹಿರ ಕೃತ್ಯಕ್ಕೆ ಅವಕಾಶ ನೀಡಿದ ಆರೋಪದ ಮೇರೆಗೆ ಜಾಗದ ಮಾಲೀಕ ಮುರಳೀಧರ ರೈ, ಕಾನೂನುಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರು ಶಾಸಕರು ಹಾಗೂ ಕೋಳಿ ಅಂಕದಲ್ಲಿ ಭಾಗವಹಿಸಿದ್ದ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 190/2025 ಅಡಿಯಲ್ಲಿ ಕಲಂ 189(2), 49, 221, 223, 190 (ಬಿಎನ್‌ಎಸ್–2023) ಹಾಗೂ ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ–1960ರ ಕಲಂ 3 ಮತ್ತು 11ರಂತೆ ಪ್ರಕರಣ ದಾಖಲಿಸಲಾಗಿದೆ.






