
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಸ್‌ಪೋರ್ಟ್ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ವಿಳಾಸ ಹೊಂದಿಕೆಯಾಗದಿದ್ದರೂ ಸುಳ್ಳು ದಾಖಲೆಗಳ ಮೂಲಕ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್ ಹಾಗೂ SHAKTI DAS ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, SHAKTI DAS ಎಂಬವರು 2025ರ ಫೆಬ್ರವರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪೊಲೀಸ್ ಪರಿಶೀಲನೆ ವೇಳೆ ಅರ್ಜಿದಾರರು ನೀಡಿದ ವಿಳಾಸ ದಾಖಲೆಗಳಲ್ಲಿನ ವಿಳಾಸಕ್ಕೆ ಹೊಂದಿಕೆಯಾಗದ ಕಾರಣ ಅರ್ಜಿಯನ್ನು ‘ನಾ-ಶಿಫಾರಸ್ಸು’ ಮಾಡಲಾಗಿತ್ತು. ಬಳಿಕ ಅವರು 2025ರ ಜೂನ್‌ನಲ್ಲಿ ಮರುಅರ್ಜಿಯನ್ನು ಸಲ್ಲಿಸಿದ್ದರು.
ಈ ಮರುಅರ್ಜಿಯ ವೇಳೆ ಠಾಣಾ ಸಿಬ್ಬಂದಿಯಾದ ಪ್ರದೀಪ್ ಎಂಬವರು, ಅರ್ಜಿದಾರರ ವಿಳಾಸಕ್ಕೆ ಸಂಬಂಧಿಸಿದ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಅವರ ಅರಿವಿಗೆ ಬಾರದಂತೆ, ಅವರ ಹೆಸರಿನಲ್ಲಿ ಸುಳ್ಳು ವರದಿ ತಯಾರಿಸಿ, ಸಹಿಯನ್ನು ಫೋರ್ಜರಿ ಮಾಡಿದ್ದಾಗಿ ಆರೋಪಿಸಲಾಗಿದೆ. ಅಲ್ಲದೆ ಮೇಲಾಧಿಕಾರಿಯಿಂದ ಶಿಫಾರಸ್ಸು ಪಡೆದು ಕಳುಹಿಸಿ, ಪರಿಶೀಲನೆಗೆ ಸಂಬಂಧಿಸಿದ ದಾಖಲೆಗಳನ್ನು ಯಾರಿಗೂ ಗೊತ್ತಾಗದಂತೆ ನಾಶಪಡಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಡಿಸೆಂಬರ್ 19ರಂದು ದಾಖಲೆಗಳ ಪರಿಶೀಲನೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿಯಾದ ಪಾಸ್‌ಪೋರ್ಟ್ ಅನ್ನು ಅಪರಾಧಿಕ ನಂಬಿಕೆ ದ್ರೋಹದ ಮೂಲಕ ಪಡೆದುಕೊಳ್ಳಲು ಸಹಾಯ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 193/2025ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 336, 337, 316(5) ಹಾಗೂ 238 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿತ ಪೊಲೀಸ್ ಸಿಬ್ಬಂದಿ ಪ್ರದೀಪ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.






