
ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಆರೋಪಿ ಒಬ್ಬನನ್ನು ಬಂಧಿಸಿ, ಕಳವಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕಡಬ ಶಿರಾಡಿ ನಿವಾಸಿ ಸುರೇಶ್ (46) ಅವರು ನೀಡಿದ ದೂರಿನಂತೆ, ಅವರು ಅಂಬ್ಯುಲೆನ್ಸ್ (ಕೆಎ–19–ಸಿ–7557) ವಾಹನದ ಚಾಲಕರಾಗಿದ್ದು, ಪ್ರತಿದಿನ ರಾತ್ರಿ ಗುಂಡ್ಯ ಚೆಕ್‌ಪೋಸ್ಟ್ ಬಳಿ ವಾಹನವನ್ನು ನಿಲ್ಲಿಸಿ ಲಾಕ್ ಮಾಡಿ ಮನೆಗೆ ತೆರಳುತ್ತಿದ್ದರು. ಡಿಸೆಂಬರ್ 19ರಂದು ರಾತ್ರಿ ಅಪಘಾತದ ಕುರಿತು ತುರ್ತು ಕರೆ ಬಂದರೆ ಬದಲಿ ಚಾಲಕರಿಗೆ ಅನುಕೂಲವಾಗಲೆಂದು ಅಂಬ್ಯುಲೆನ್ಸ್ ಕೀಯನ್ನು ವಾಹನದಲ್ಲೇ ಇಟ್ಟು ಹೋಗಿದ್ದರು.
ಮರುದಿನ ಡಿಸೆಂಬರ್ 20ರಂದು ಬೆಳಿಗ್ಗೆ ಮನೆೆಯಿಂದ ಬಂದು ನೋಡಿದಾಗ, ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 117/2025ರಂತೆ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋದನ್ (22) ಎಂಬಾತನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೆನ್ಸ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.






