ನಗರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಭೀಕರ ಕೊಲೆ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟಿಸಿದೆ. ಪತಿಯೇ ಪತ್ನಿಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಭೀಕರವಾಗಿ ಹತ್ಯೆ ಮಾಡಿ, ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಗರವನ್ನೇ ಬೆಚ್ಚಿಬೀಳಿಸಿದೆ.

ಈ ಪ್ರಕರಣ ಜಗಳದಲ್ಲಿ ಪ್ರಾರಂಭವಾಗಿ ಅತಿರೇಕಕ್ಕೆ ತಿರುಗಿ ಜೀವ ಕಿತ್ತುಕೊಂಡಿದೆ.

ದಾಂಪತ್ಯದಲ್ಲಿ ಅಸಮಾಧಾನ!
ಕೊಲೆಯಾದ ಮಹಿಳೆಯನ್ನು ಆಯೇಷಾ ಸಿದ್ದಿಕಿ (39) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಆಕೆಯ ಪತಿ ಸೈಯ್ಯದ್ ಜಬಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸೈಯ್ಯದ್ ಜಬಿಗೆ ಆಯೇಷಾ ಸಿದ್ದಿಕಿ ಎರಡನೇ ಪತ್ನಿಯಾಗಿದ್ದು, ಆಯೇಷಾಗೆ ಆತ ಮೂರನೇ ಪತಿಯಾಗಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ದಾಂಪತ್ಯ ಜೀವನದಲ್ಲಿ ಹಲವು ದಿನಗಳಿಂದ ಅಸಮಾಧಾನ ಮತ್ತು ಅನುಮಾನಗಳು ಮನೆಮಾಡಿದ್ದವು ಎಂಬುದೂ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಕಂಟಕವಾಯ್ತಾ ಮಸಾಜ್ ಪಾರ್ಲರ್!
ಆಯೇಷಾ ಸಿದ್ದಿಕಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವಿಷಯವೇ ಪತಿ-ಪತ್ನಿಯ ನಡುವಿನ ಪ್ರಮುಖ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಪತಿ ಸೈಯ್ಯದ್ ಜಬಿ, ಪತ್ನಿಗೆ ಮಸಾಜ್ ಪಾರ್ಲರ್ ಕೆಲಸವನ್ನು ಬಿಡುವಂತೆ ಹಲವು ಬಾರಿ ಸೂಚಿಸಿದ್ದಾನೆ. ಆದರೆ ಆಯೇಷಾ ಅದನ್ನು ಒಪ್ಪದೆ ಮುಂದುವರೆದಿದ್ದಾಳೆ ಎನ್ನಲಾಗಿದೆ. ಇದೇ ವಿಚಾರವಾಗಿ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲೇ ಮೃತಪಟ್ಟ ಆಯೇಷಾ!
ನಿನ್ನೆ ರಾತ್ರಿ ಕೂಡ ಇದೇ ವಿಷಯಕ್ಕೆ ಸಂಬಂಧಿಸಿ ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದವು ಕ್ಷಣಾರ್ಧದಲ್ಲಿ ಗಲಾಟೆಯಾಗಿ, ಆಕ್ರೋಶಕ್ಕೆ ಒಳಗಾದ ಸೈಯ್ಯದ್ ಜಬಿ, ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಪತ್ನಿಯ ಕುತ್ತಿಗೆಗೆ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕುತ್ತಿಗೆ ಸೀಳಿ ರಕ್ತಸ್ರಾವದಿಂದ ಆಯೇಷಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಪರಾಧವನ್ನು ಒಪ್ಪಿಕೊಂಡ ಆರೋಪಿ!
ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಅಗ್ರಹಾರ ಲೇಔಟ್ನಲ್ಲಿ ನಡೆದಿದ್ದು, ಶಬ್ದ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗಲೇ ಆಯೇಷಾ ಜೀವ ಕಳೆದುಕೊಂಡಿದ್ದಾಳೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಘಟನೆಯ ನಂತರ ಆತಂಕಗೊಂಡ ಆರೋಪಿ, ಯಾವುದೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡದೇ ನೇರವಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ.

Leave a Reply

Your email address will not be published. Required fields are marked *

Join WhatsApp Group
error: Content is protected !!