ಬೆಂಗಳೂರು (Bengaluru) ನಡೆದ ನವವಿವಾಹಿತೆ ಗಾನವಿ ಆತ್ಮಹತ್ಯೆ (Suicide) ಪ್ರಕರಣ ಇದೀಗ ಭೀಕರ ತಿರುವು ಪಡೆದುಕೊಂಡಿದೆ. ಹೆಂಡತಿ ಮೃತಪಟ್ಟ ಬಳಿಕ ಪತಿ ಸೂರಜ್ (Suraj) ಕೂಡ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಈಗ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಗಂಡ-ಹೆಂಡತಿ ಇಬ್ಬರು ಈ ರೀತಿ ತಮ್ಮ ಬದುಕನ್ನ ಅಂತ್ಯಗೊಳಿಸಿಕೊಂಡಿದ್ದು ನಿಜಕ್ಕೂ ನೋವಿನ ಸಂಗತಿ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆ ಈಗ ಕುಟುಂಬ ದುರಂತ ಆಗಿ ಬದಲಾಗಿದೆ.

ನಾಗಪುರದಲ್ಲಿ ಪ್ರಾಣ ಬಿಟ್ಟ ಪತಿ ಸೂರಜ್

ಗಾನವಿ ಸಾವಿನ ನಂತರ ಕುಟುಂಬಸ್ಥರು ಸೂರಜ್‌ ಕುಟುಂಬದವರ ವಿರುದ್ಧ ಆರೋಪ ಮಾಡಿದ್ರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪತಿ ಸೂರಜ್, ತಮ್ಮ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಜೊತೆ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು. ಅಲ್ಲಿ ಏನಾಯ್ತೋ ಗೊತ್ತಿಲ್ಲ, ಸೂರಜ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ತನಿಖೆ ಈಗ ನಾಗಪುರಕ್ಕೂ ಲಿಂಕ್ ಆಗಿದೆ. ಗಾನವಿ ಸಾವು ಈ ಕುಟುಂಬವನ್ನ ಛಿದ್ರ ಮಾಡಿದೆ.

ಅತ್ತೆ ಜಯಂತಿ ಸಾವು ಬದುಕಿನ ಹೋರಾಟ

ಮಗನ ಜೊತೆಯಲ್ಲೇ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅತ್ತ ಗಾನವಿ ಮನೆಯಲ್ಲಿ ಸೂತಕದ ಛಾಯೆ ಇದ್ರೆ, ಇತ್ತ ಸೂರಜ್ ಮನೆಯವರ ಕಥೆ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಒಂದೂವರೆ ತಿಂಗಳಷ್ಟೇ ಆಗಿತ್ತು ಮದುವೆಯಾಗಿ!

ವಿದ್ಯಾರಣ್ಯಪುರದ ಸೂರಜ್ ಮತ್ತು ಗಾನವಿ ಮದುವೆ ಅಕ್ಟೋಬರ್ 29ರಂದು ನಡೆದಿತ್ತು. ನವೆಂಬರ್ 23ರಂದು ಅರಮನೆ ಮೈದಾನದಲ್ಲಿ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಬರೋಬ್ಬರಿ 40 ಲಕ್ಷ ಖರ್ಚು ಮಾಡಿ ರಿಸೆಪ್ಷನ್ ಕೂಡ ಮಾಡಿದ್ರು. ಆದ್ರೆ ಮದುವೆಯಾಗಿ ಒಂದೂವರೆ ತಿಂಗಳು ಕಳೆಯೋದ್ರಲ್ಲೇ ಇಬ್ಬರೂ ಮಸಣದ ಹಾದಿ ಹಿಡಿದಿದ್ದಾರೆ. ವಿಧಿಯಾಟಕ್ಕೆ ಎರಡು ಜೀವಗಳು ಬಲಿಯಾಗಿವೆ.

ಹನಿಮೂನ್ ಅರ್ಧಕ್ಕೆ ಮುಗಿಸಿ ಬಂದಿದ್ರು

ಮದುವೆ ನಂತರ ಖುಷಿಯಿಂದ ಹನಿಮೂನ್‌ಗೆ ಅಂತ ಶ್ರೀಲಂಕಾಕ್ಕೆ ಹೋಗಿದ್ದ ಈ ಜೋಡಿ, 10 ದಿನದ ಟ್ರಿಪ್ ಪ್ಲಾನ್ ಮಾಡಿದ್ರು. ಆದ್ರೆ ಐದೇ ದಿನಕ್ಕೆ ಅಲ್ಲಿಂದ ವಾಪಸ್ ಬಂದಿದ್ರು. ಅಲ್ಲಿ ಏನಾಯ್ತು ಅನ್ನೋದು ಇನ್ನೂ ನಿಗೂಢವಾಗಿದೆ. ಭಾನುವಾರ ವಾಪಸ್ ಬಂದು, ಸೋಮವಾರ ಗಾನವಿ ತವರು ಮನೆಗೆ ಹೋಗಿದ್ರು. ಬುಧವಾರ ಮನೆಯಲ್ಲೇ ನೇಣು ಹಾಕಿಕೊಂಡಿದ್ರು. ಚಿಕಿತ್ಸೆ ಫಲಿಸದೆ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ರು.

ರಾಮಮೂರ್ತಿನಗರ ಠಾಣೆಯಲ್ಲಿ ಕೇಸ್

ಈಗಾಗಲೇ ಗಾನವಿ ಆತ್ಮಹತ್ಯೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈಗ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿರೋದ್ರಿಂದ ಕೇಸ್ ಮತ್ತಷ್ಟು ಜಟಿಲವಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಸಲಿ ಸತ್ಯ ಹೊರಬರಬೇಕಿದೆ. ನಾಗಪುರ ಪೊಲೀಸರಿಂದಲೂ ಮಾಹಿತಿ ಪಡೆಯಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!