
ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ರೈಲ್ವೇ ಸೇತುವೆ ನಿರ್ಮಾಣ ಹಾಗೂ ಕೊಳ್ತಿಗೆ, ಕೆದಿಲ ಮತ್ತು ಒಳಮೊಗ್ರು ಗ್ರಾಮದ ಮುಳಿಯಡ್ಕದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಒಟ್ಟು ೧೬ ಕೋಟಿ ರೂ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿಯವರಿಗೆ ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಚತುಷ್ಫಥ ಕಾಮಗಾರಿ ಪ್ರಗತಿಯಲ್ಲಿದ್ದು ಇಲ್ಲಿ ಹಾದು ಹೋಗುವ ರೈಲ್ವೇ ಸೇತುವೆಯನ್ನು ಅಗಲ ಮಾಡಬೇಕಿದೆ. ಸೇತುವೆಯ ಅಗಲೀಕರಣಕ್ಕೆ ೮ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಅನುದಾನವನ್ನು ಒದಗಿಸುವುದಾಗಿ ಈ ಹಿಂದೆ ಪುತ್ತೂರಿಗೆ ಭೇಟಿ ನೀಡಿದ್ದ ಸಚಿವರು ಶಾಸಕರಲ್ಲಿ ಭರವಸೆಯನ್ನು ನೀಡಿದ್ದರು. ತಕ್ಷಣ ಅನುದಾನ ಒದಗಿಸುವುದಾಗಿ ಶಾಸಕರಿಗೆ ಭರವಸೆಯನ್ನು ನೀಡಿದ್ದಾರೆ.
ಕೊಳ್ತಿಗೆ , ಕೆದಿಲ ಮತ್ತು ಒಳಮೊಗ್ರು ಗ್ರಾಮದ ಮುಳಿಯಡ್ಕದಲ್ಲಿ ಹೊಸ ಸೇತುವೆಯ ನಿರ್ಮಾಣಕ್ಕೂ ಶಾಸಕರು ಸಚಿವರಲ್ಲಿ ಬೇಡಿಕೆ ಸಲ್ಲಿಸಿದ್ದಾರೆ. ಈ ಮೂರು ಸೇತುವೆ ಅತ್ಯಗತ್ಯವಾಗಿ ಆಗಬೇಕಿದ್ದು, ಜನಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಮುಳಿಯಡ್ಕದಲ್ಲಿ ಈ ಹಿಂದೆ ನಿರ್ಮಾಣವಾದ ಸೇತುವೆ ಕಿರಿದಾಗಿದ್ದು, ಅಗಲ ಕಡಿಮೆ ಇರುವ ಕಾರಣ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದು ಈ ಮೂರು ಸೇತುವೆಗೆ ಒಟ್ಟು ೮ ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ.






