
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡಿದ್ದ ಆರೋಪಿಯನ್ನು ಪೊಲೀಸರು ತ್ವರಿತವಾಗಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಡಿಸೆಂಬರ್ 25ರಂದು ಸಂಜೆ ಗುರುನಗರ ನಿವಾಸಿ ಮಹಿಳೆ ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ಅಂಗಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಶಂಕರಭವನ ಹೋಟೆಲ್ ಸಮೀಪ ಹಿಂದಿನಿಂದ ಬಂದ ಅಪರಿಚಿತನೊಬ್ಬ ಏಕಾಏಕಿ ಅವರ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿದ್ದನು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 128/2025, ಭಾರತೀಯ ನ್ಯಾಯ ಸಂಹಿತೆ 304(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೊಂಡ ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಗವಿರಾಜ್ ಹಾಗೂ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ, ಠಾಣಾ ಸಿಬ್ಬಂದಿ ಹಾಗೂ ದಕ್ಷಿಣ ಉಪವಿಭಾಗದ ಕ್ರೈಂ ಸಿಬ್ಬಂದಿಯ ತಂಡವು ಸಾಕ್ಷ್ಯಾಧಾರಗಳ ಆಧಾರದಲ್ಲಿ ಡಿಸೆಂಬರ್ 28ರಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಬಂಟ್ವಾಳ ತಾಲೂಕಿನ ಕಕ್ಕೆಪದವು ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿ ರೋಹಿತ್ ಬಿ. ದಾಸ್ (24), ತಂದೆ ಲಕ್ಷ್ಮಣ ದಾಸ್, ಬಿತ್ತ ಮನೆ, ಪಂಚದುರ್ಗ ಪ್ರೌಢಶಾಲೆ ಹಿಂಭಾಗ, ಕಕ್ಕೆಪದವು, ಉಳಿಗ್ರಾಮ ಅಂಚೆ, ಬಂಟ್ವಾಳ ತಾಲೂಕು ನಿವಾಸಿಯಾಗಿದ್ದು, ಆರೋಪಿಯಿಂದ ಸುಲಿಗೆ ಮಾಡಲಾದ ಸುಮಾರು ₹3.50 ಲಕ್ಷ ಮೌಲ್ಯದ 32 ಗ್ರಾಂ ಚಿನ್ನದ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಬಳಸಿದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯ ವೇಳೆ ಆರೋಪಿ ಸ್ವಿಗ್ಗಿ ಮತ್ತು ಝೋಮ್ಯಾಟೋ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದುದಾಗಿ, ಇತ್ತೀಚೆಗೆ ಸ್ಕೂಟರ್ ಖರೀದಿ ಸೇರಿದಂತೆ ಇತರೆ ಕಾರಣಗಳಿಂದಾಗಿ ಸಾಲಭಾರ ಹೆಚ್ಚಾಗಿ, ಅದನ್ನು ತೀರಿಸಲು ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ.
2025ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಏಳು ಸರಗಳ್ಳತನ ಪ್ರಕರಣಗಳನ್ನೂ ಭೇದಿಸಿ, ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.






