ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ. (25) ಅವರ ದೂರಿನಂತೆ, ಅವರು ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್ 29ರಂದು ಮುಂಜಾನೆ ಕೆಎ–18–ಸಿ–3048 ಸಂಖ್ಯೆಯ ಟಾಟಾ ಲಾರಿ ತಪ್ಪು ದಿಕ್ಕಿನಿಂದ ಟೋಲ್ ಗೇಟ್‌ಗೆ ಪ್ರವೇಶಿಸಿದೆ. ಟೋಲ್ ಸಿಬ್ಬಂದಿಗಳು ಶುಲ್ಕ ಪಾವತಿಸುವಂತೆ ಸೂಚಿಸಿದಾಗ ಲಾರಿ ಚಾಲಕ ಹಣ ನೀಡಲು ನಿರಾಕರಿಸಿ, ಗೇಟ್‌ಗೆ ಹಾನಿ ಮಾಡುತ್ತಾ ವಾಹನ ಚಲಾಯಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮೀರಿಯಾಗಿ ಲಾರಿ ಚಾಲಕ ಹಾಗೂ ಅವನ ಜೊತೆಗಿದ್ದ ಮತ್ತೊಬ್ಬರು ಟೋಲ್ ಸಿಬ್ಬಂದಿಗಳಾದ ಅಂಕಿತ್ ಮತ್ತು ರೋಹಿತ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ನಂತರ ಮತ್ತೊಂದು ಪಿಕಪ್ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಟೋಲ್ ಬೂತ್ ಒಳಗೆ ಅಕ್ರಮವಾಗಿ ಪ್ರವೇಶಿಸಿ ಪುನಃ ಹಲ್ಲೆ ನಡೆಸಿದ ಆರೋಪವೂ ಇದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಂ 329(3), 351(2), 352, 115(2), 118(1), 324(2) ಓದು 3(5) ಭಾರತೀಯ ನ್ಯಾಯ ಸಂಹಿತೆ (BNS) 2023 ಹಾಗೂ ಮೋಟಾರ್ ವಾಹನ ಕಾಯ್ದೆಯ 184(ಇ)ರಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!