
ಪುತ್ತೂರು: ಅಬ್ದುಲ್ ಸಲಾಂ ತಂಙಳ್ ಅವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಸಾಲ್ಮರ ಸೈಯ್ಯದ್ ಮಲೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಈ ಬಾರಿ ಡಿ.31ರಿಂದ ಜ.4ರ ತನಕ ವಿಜೃಂಭಣೆಯಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ನಾಟಿವೈದ್ಯ ಡಾ. ಸಂಶುದ್ದೀನ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಉರೂಸ್ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗಿದ್ದು, ಹೊಸದಾಗಿ ನಿರ್ಮಾಣಗೊಂಡ ಮದರಸದ ಎದುರು ವಿವಾಹ ಸಭಾಭವನ, ಸೈಯ್ಯದ್ ಮಲೆಗೆ ತೆರಳುವ ರಸ್ತೆಯ ಅಗಲೀಕರಣ ಹಾಗೂ ಮಸೀದಿಯ ಉಳಿದ ಕಾಮಗಾರಿಗಳನ್ನು ಜಮಾಅತ್ ಸದಸ್ಯರ ಸಹಕಾರದಿಂದ ಪೂರ್ಣಗೊಳಿಸಲಾಗಿದೆ. ಅಲ್ಲದೆ ಸಾಲ್ಮರದಲ್ಲಿ ನೂತನವಾಗಿ ಜೂನಿಯರ್ ಕಾಲೇಜು ಸ್ಥಾಪಿಸಲಾಗಿದ್ದು, ರಂಜಾನ್ ನಂತರ ಕಾಲೇಜು ಕಾರ್ಯಾರಂಭಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಉರೂಸ್ ಪ್ರಯುಕ್ತ ನಾಲ್ಕು ದಿನಗಳ ಕಾಲ ಧಾರ್ಮಿಕ ಉಪನ್ಯಾಸಗಳು ನಡೆಯಲಿದ್ದು, ಪ್ರತಿದಿನ ರಾತ್ರಿ 8ರಿಂದ 9.55ರವರೆಗೆ ಕಾರ್ಯಕ್ರಮ ನಡೆಯಲಿದೆ. ಡಿ.31ರಂದು ಸೈಯ್ಯದ್ ಮುಹಮ್ಮದ್ ತಂಙಳ್ ಸಾಲ್ಕರ ದುವಾ ನೆರವೇರಿಸಲಿದ್ದು, ಉಸ್ತಾದ್ ಉಮ್ಮರ್ ದಾರಿಮಿ ಸಾಲ್ಮರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೈಯ್ಯದ್ ಮುಹಮ್ಮದ್ ಹಾಫಿಝ್ ಜಿಫ್ರಿ ತಂಙಳ್ ರಹ್ಮಾನಿ (ವಯನಾಡ್) ಮುಖ್ಯ ಪ್ರಭಾಷಣೆ ನೀಡಲಿದ್ದಾರೆ.
ಜ.1ರಂದು ಸೈಯ್ಯದ್ ಅಬೂಬಕ್ಕರ್ ತಂಙಳ್ ಕೆಮ್ಮಾಯಿ ದುವಾ ನೆರವೇರಿಸಲಿದ್ದು, ಹಸನ್ ಮುಸ್ಲಿಯಾರ್ ಕಣ್ಣೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.2ರಂದು ಸೈಯ್ಯದ್ ಮುಖಾರ್ ತಂಙಳ್ ಕುಂಬೋಳ್ ದುವಾ ನೆರವೇರಿಸಲಿದ್ದು, ಶೈಖುನಾ ಅಲ್ ಹಾಜ್ ಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಿಂಸಾರುಲ್ ಹಕ್ ಹುದವಿ ಮುಖ್ಯ ಪ್ರಭಾಷಣೆ ನೀಡಲಿದ್ದಾರೆ. ಜ.3ರಂದು ಅಲ್‌ಹಾಜ್ ಸೈಯ್ಯದ್ ಅಹ್ಮದ್ ಪೊಕೋಯ ತಂಙಳ್ ದುವಾ ನೆರವೇರಿಸಲಿದ್ದು, ಅನ್ವರ್ ಅಲಿ ಹುದವಿ ಮಲಪ್ಪುರಂ ಮುಖ್ಯ ಪ್ರಭಾಷಣೆ ಮಾಡಲಿದ್ದಾರೆ. ಜ.4ರಂದು ಉರೂಸ್ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಸೈಯ್ಯದ್ ಶಫಿವುಲ್ಲಾ ತಂಙಳ್ ಬುಖಾರಿ ಮಣ್ಣರ್ಕಾಡ್ ದುವಾ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಲಿರಾರ್ ಲಕ್ಷದೀಪ ಅವರಿಂದ ಸೂಫಿ ಗಾಯನ ಕಾರ್ಯಕ್ರಮ ನಡೆಯಲಿದೆ.
ಉರೂಸ್ ಸಮಗ್ರ ಕಾರ್ಯಕ್ರಮದ ನೇತೃತ್ವವನ್ನು ಸೈಯ್ಯದ್ ಮಹಮ್ಮದ್ ತಂಙಳ್ ಅವರು ವಹಿಸಲಿದ್ದಾರೆ ಎಂದು ಹೇಳಿದರು
ಸಾಲ್ಮರ ಸೈಯ್ಯದ್ ಮಲೆ ಅನೇಕ ವರ್ಷಗಳ ಇತಿಹಾಸ ಹೊಂದಿದ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಜಾತಿ–ಧರ್ಮ ಭೇದವಿಲ್ಲದೆ ಅನೇಕರು ಇಲ್ಲಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಿರುವುದು ವಿಶೇಷ ಎಂದು ಡಾ. ಸಂಶುದ್ದೀನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೈಯ್ಯದ್ ಮಲೆ ಜಮಾಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕಾರ್ಯದರ್ಶಿ ಇಲ್ಯಾಸ್, ಉರೂಸ್ ಸಮಿತಿ ಸದಸ್ಯ ಅಲಿ ಸಾಲ್ಮರ, ಕೋಶಾಧಿಕಾರಿ ತಾಜುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.






