
ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9ನೇ ಅಡ್ಡ ರಸ್ತೆಯಲ್ಲಿನ ಬಹುಕಾಲದ ರಸ್ತೆ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ಥಳೀಯ ನಿವಾಸಿಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವ ಸಂಬಂಧ ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ.
ವಿದ್ಯಾಪುರ ಪ್ರದೇಶದ ಆರು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದೆ ನಿವಾಸಿಗಳು ಹಲವು ವರ್ಷಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ರಸ್ತೆ ನಿರ್ಮಾಣಕ್ಕೆ ಅಗತ್ಯವಿದ್ದ ಜಾಗ ಖಾಸಗಿ ವ್ಯಕ್ತಿಯ ಒಡೆತನದಲ್ಲಿದ್ದ ಕಾರಣ ಸಮಸ್ಯೆ ಬಗೆಹರಿಯದೆ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ಅವರು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಭೆಯ ಸಂದರ್ಭದಲ್ಲಿ ಜಾಗದ ಮಾಲಿಕರಾದ ಮುತ್ತಪ್ಪ ಅವರು ಮಾನವೀಯತೆ ಪ್ರದರ್ಶಿಸಿ ರಸ್ತೆ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡಲು ಸಮ್ಮತಿಸಿದರು. ಇದರಿಂದಾಗಿ ದೀರ್ಘಕಾಲದ ಬೇಡಿಕೆ ಈಡೇರಿದ್ದು, ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.
ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದ ಶಾಸಕ ಅಶೋಕ್ ರೈ ಹಾಗೂ ಜಾಗ ಬಿಟ್ಟುಕೊಟ್ಟ ಮುತ್ತಪ್ಪ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯರಾದ ಜಯಮ್ಮ, ಶಿಲ್ಪ, ಜಮೀಲಾ, ಪಲ್ಲವಿ, ಗೀತಾ, ಬ್ಲಾಕ್ ಮಹಿಳಾ ಘಟಕದ ಕಾರ್ಯದರ್ಶಿ ಸುಮಯ್ಯ, ಫಾತಿಮಾ, ಪುತ್ತೂರು ಸರ್ಕಾರಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಅನ್ವರ್, ಮುತ್ತಪ್ಪ ಗೌಡ, ಕಾಂಗ್ರೆಸ್ ಮುಖಂಡ ಸಾಬಾಸಾಹೇಬ್, ಅಬ್ದುಲ್ ಸಲೀಂ, ಬ್ಲಾಕ್ ಕೋಶಾಧಿಕಾರಿ ಮೂಸೆಕುಂಞಿ, ಅಬ್ದುಲ್ ಕುಂಞಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸುಮಾರು 15 ವರ್ಷಗಳಿಂದ ನಾವು ರಸ್ತೆ ಇಲ್ಲದೆ ಪರದಾಡುತ್ತಿದ್ದೆವು. ಮನೆಗೆ ಅಗತ್ಯ ವಸ್ತುಗಳನ್ನು ಕೂಡ ನಡೆದುಕೊಂಡೇ ತರುವ ಪರಿಸ್ಥಿತಿ ಇತ್ತು. ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಿದರು. ಮುತ್ತಪ್ಪ ಅವರು ಜಾಗ ಬಿಟ್ಟುಕೊಟ್ಟು ಮಾನವೀಯತೆ ತೋರಿದ್ದಾರೆ.”
– ಆಯಿಷಾ, ಸ್ಥಳೀಯ ನಿವಾಸಿ






