ಸುಳ್ಯ: ಸುಳ್ಯ ಕಸಬ ಗ್ರಾಮದ ನಿವಾಸಿ ಅಬ್ದುಲ್ ಜಬ್ಬಾರ್ ಅವರ ಸಾವಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ, ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಕರಣದ ಪಿರ್ಯಾದಿದಾರರಾದ ಸುಳ್ಯ ಕಸಬ ಗ್ರಾಮದ ಸುಮಯ್ಯ (35) ಅವರ ದೂರಿನಂತೆ, ದಿನಾಂಕ 16.10.2025ರಂದು ಮಧ್ಯಾಹ್ನ ಅಬ್ದುಲ್ ಜಬ್ಬಾರ್ ಅವರನ್ನು ಆರೋಪಿಗಳಾದ ಮೊಹಮ್ಮದ್ ರಫೀಕ್ ಹಾಗೂ ಇತರರು ಬಾಡಿಗೆ ವಿಷಯದ ನೆಪದಲ್ಲಿ ದುಗ್ಗಲಡ್ಕಕ್ಕೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ, ಬಳಿಕ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದರು.
ಅನಂತರ ದಿನಾಂಕ 17.10.2025ರಂದು ಅಬ್ದುಲ್ ಜಬ್ಬಾರ್ ಅವರು ಮನೆಯಲ್ಲಿದ್ದ ವೇಳೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಕುರಿತು ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2025ರ ಅಡಿಯಲ್ಲಿ ಕಲಂ 105 ಹಾಗೂ 3(5) ಬಿಎನ್‌ಎಸ್ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ವೈದ್ಯಕೀಯ ವರದಿಯಲ್ಲಿ ಹಲ್ಲೆಯ ಪರಿಣಾಮವೇ ಸಾವಿಗೆ ಕಾರಣವೆಂದು ದೃಢಪಟ್ಟ ಹಿನ್ನೆಲೆಯಲ್ಲಿ, ಪ್ರಕರಣವನ್ನು ಕಲಂ 103 ಜೊತೆಗೆ 3(5) ಬಿಎನ್‌ಎಸ್ ಅಡಿಯಲ್ಲಿ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.
ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿಯಾಗಿರುವ ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41) ಅವರನ್ನು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಇನ್ನೋರ್ವ ಆರೋಪಿಯಾದ ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್ @ ಮನು (42) ಎಂಬಾತನನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಸುಳ್ಯ ಪೊಲೀಸರು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!