
ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ವೃದ್ಧನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಆತನಿಗೆ ಯುವತಿ ಪಾಠ ಕಲಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ವೃದ್ಧನೊಬ್ಬ ತನ್ನ ಪಕ್ಕದಲ್ಲೇ ಕುಳಿತಿದ್ದ ಯುವತಿಗೆ ಮೊಣಕೈ ಮೂಲಕ ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ ಯುವತಿ ಇದನ್ನು ಗಮನಿಸದಂತೆ ಸುಮ್ಮನಿದ್ದರೂ, ಆತನ ವರ್ತನೆ ಮಿತಿಮೀರಿದಾಗ ತನ್ನ ಮೊಬೈಲ್‌ನಲ್ಲಿ ಆತನ ಚೇಷ್ಟೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ತನ್ನ ತಾಳ್ಮೆ ಕಳೆದುಕೊಂಡ ಯುವತಿ, ಎಲ್ಲ ಪ್ರಯಾಣಿಕರ ಮುಂದೆಯೇ ವೃದ್ಧನಿಗೆ ಸತತವಾಗಿ ಕೆನ್ನೆಗೆ ಬಾರಿಸಿ ಆತನ ಮುಖವಾಡವನ್ನು ಕಳಚಿದ್ದಾಳೆ.
ಪ್ರಯಾಣಿಕರ ಮುಂದೆ ಬಯಲಾದ ವೃದ್ಧನ ಚಾಳಿ ಯುವತಿ ಕೂಗಾಡುತ್ತಾ ಏಟು ನೀಡಲು ಶುರು ಮಾಡಿದಾಗ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಸ್ತಬ್ದರಾಗಿದ್ದಾರೆ. ವಿಡಿಯೋದಲ್ಲಿರುವ ಭಾಷೆ ಸ್ಪಷ್ಟವಾಗಿ ಅರ್ಥವಾಗದಿದ್ದರೂ, ಆ ವೃದ್ಧನ ಕೆಟ್ಟ ನಡವಳಿಕೆ ಮತ್ತು ಅದಕ್ಕೆ ಯುವತಿ ನೀಡಿದ ತಕ್ಕ ಉತ್ತರ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹರಿದಾಡುತ್ತಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ.
ನೆಟ್ಟಿಗರ ಆಕ್ರೋಶ ಮತ್ತು ಬೆಂಬಲ ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಡಿಸೆಂಬರ್ 29 ರಂದು ವಿಡಿಯೋ ಅಪ್‌ಲೋಡ್ ಆದಾಗಿನಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಯುವತಿ ಮಾಡಿದ್ದು ಸರಿಯಾಗಿದೆ, ಇಂತಹವರಿಗೆ ಚಪ್ಪಲಿ ಏಟೇ ಸರಿಯಾದ ಶಿಕ್ಷೆ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. “ನಾವು ಕೂಡ ಪ್ರಯಾಣಿಸುತ್ತೇವೆ, ಮಹಿಳೆಯರಿಗೆ ಗೌರವ ಕೊಡಬೇಕು. ಇಂತಹ ಕೃತ್ಯ ಎಸಗುವವರನ್ನು ಜೈಲಿಗೆ ಅಟ್ಟಬೇಕು” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಇಂತಹ ಕಿರುಕುಳಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಯುವತಿಯ ಧೈರ್ಯವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.






