ವಿಟ್ಲ: ಪಟ್ಟಣದ ಮಂಗಳೂರು ರಸ್ತೆಯ ಗಣೇಶ್ ಡ್ರೈವಿಂಗ್ ಸ್ಕೂಲ್ ಸಮೀಪದ ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಶುಕ್ರವಾರ ಅಚಾನಕ್ ಬೆಂಕಿ ತಗುಲಿದ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಂಗಡಿಯೊಳಗಿನಿಂದ ಭಾರೀ ಹೊಗೆ ಹಾಗೂ ಸದ್ದುಗಳು ಕೇಳಿಬಂದಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಸ್ಥಳೀಯರು ತಕ್ಷಣವೇ ನೀರು ಹಾಗೂ ಮರಳು ಎರಚಿ ಬೆಂಕಿ ನಂದಿಸಲು ಯತ್ನಿಸಿದರೂ, ಬೆಂಕಿಯ ಉಗ್ರತೆಯಿಂದಾಗಿ ಅದನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು.
ಅಂಗಡಿಗೆ ತಗುಲಿದ ಬೆಂಕಿ ಪಕ್ಕದಲ್ಲಿರುವ ಟೈಲರ್ ಶಾಪ್‌ಗೂ ವ್ಯಾಪಿಸಿರುವುದರಿಂದ ವ್ಯಾಪಾರ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಸಮೀಪದಲ್ಲೇ ಫಾಸ್ಟ್ ಫುಡ್ ಅಂಗಡಿ ಹಾಗೂ ಅಮಿತ್ ಹೋಟೆಲ್ ಇರುವುದರಿಂದ ಬೆಂಕಿ ಇನ್ನಷ್ಟು ವಿಸ್ತರಿಸುವ ಭೀತಿ ಎದುರಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸಿದ್ದು, ಪೊಲೀಸರು ಕೂಡ ತಕ್ಷಣವೇ ಸ್ಥಳಕ್ಕೆ ಧಾವಿಸಿ ಜನಸಂದಣಿ ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಲಾಗಿದ್ದು, ವಿಟ್ಲದಲ್ಲಿ ಸ್ವಂತ ಅಗ್ನಿಶಾಮಕ ಕೇಂದ್ರ ಇಲ್ಲದ ಕಾರಣ ಪುತ್ತೂರು ಅಥವಾ ಬಿಸಿರೋಡ್‌ನಿಂದ ಅಗ್ನಿಶಾಮಕ ವಾಹನ ಆಗಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.














