
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿ ಹೋರಿಯೊಂದು ಮೃತಪಟ್ಟ ಘಟನೆ ವರದಿಯಾಗಿದೆ.
ಸವಣಾಲು ಗ್ರಾಮ, ಬೆಳ್ತಂಗಡಿ ತಾಲೂಕು ನಿವಾಸಿ ಮಹಮ್ಮದ್ ರಫೀಕ್ (45) ಅವರು ನೀಡಿದ ದೂರಿನಂತೆ, ದಿನಾಂಕ 15-01-2026 ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲಿನ ಎಂ.ಹೆಚ್. ಸ್ಟೋರ್ ಎದುರು, ರಾ.ಹೆ.73ರಲ್ಲಿ ರಸ್ತೆ ದಾಟುತ್ತಿದ್ದ ಹೋರಿಗೆ ಗುರುವಾಯನಕೆರೆ ಕಡೆಯಿಂದ ಮದ್ದಡ್ಕ ಕಡೆಗೆ ಸಾಗುತ್ತಿದ್ದ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದಿದೆ.
ಗೂಡ್ಸ್ ರಿಕ್ಷಾ ಚಾಲಕ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದ ಪರಿಣಾಮ ಹೋರಿ ಡಾಮರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಪಿರ್ಯಾಧಿದಾರರು ಹಾಗೂ ಸ್ಥಳದಲ್ಲಿದ್ದವರು ಪರಿಶೀಲಿಸಿದಾಗ ಹೋರಿ ಅಪಘಾತ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.
ಅಪಘಾತಕ್ಕೆ ಕಾರಣವಾದ ಗೂಡ್ಸ್ ರಿಕ್ಷಾ ಚಾಲಕ ಅಪಘಾತ ಸ್ಥಳದಲ್ಲಿ ವಾಹನ ನಿಲ್ಲಿಸದೇ, ಹೋರಿಗೆ ಯಾವುದೇ ಉಪಚಾರ ನೀಡದೇ ಹಾಗೂ ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ. 03/2026 ಕಲಂ 281 BNS ಹಾಗೂ 134(a & b) r/w 187 IMV Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.





