
ಮಂಗಳೂರು: ಕುಳಾಯಿ ಗ್ರಾಮದ ಯಶೋದ ಕ್ಲಿನಿಕ್ ಸಮೀಪದ ಮನೆವೊಂದರಲ್ಲಿ ನಡೆದ ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರಗಳ ಕಳ್ಳತನ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿ, ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಕುಳಾಯಿ ಗ್ರಾಮದ ಮನೆ ನಂ. 6-177ರಲ್ಲಿ ವಾಸವಿದ್ದ ಶ್ರೀಮತಿ ಅಮಿತಾ (43), ಗಂಡ ಸುರೇಶ್ ಅವರು ನೀಡಿದ ದೂರಿನಂತೆ, ತಾಯಿ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ದಿನಾಂಕ 26-12-2025ರ ರಾತ್ರಿ ನಡೆದಿದೆ. ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಒಳಪ್ರವೇಶಿಸಿ ಸುಮಾರು ₹1 ಲಕ್ಷ ಮೌಲ್ಯದ ಪಸಪ್ಪ ದೈವದ ತಾಮ್ರದ ಮೂರ್ತಿ, ಮಂತ್ರದೇವತೆಯ ಬೆಳ್ಳಿ ಮೂರ್ತಿ, ಕಲ್ಲುರ್ಟಿ–ಪಂಜುರ್ಲಿ ದೈವದ ತಾಮ್ರದ ಮೂರ್ತಿ, ಬೆಳ್ಳಿಯ ಕಡ್ಸಲೆ, ತಾಮ್ರದ ಘಂಟೆ, ಚೆಂಬುಗಳು ಹಾಗೂ ಎಲ್‌ಇಡಿ ಟಿವಿಯನ್ನು ಕಳವು ಮಾಡಿದ್ದರು.
ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 170/2025, ಕಲಂ 331(4), 305(ಎ) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ವಾಜೀದ್ ಜೆ @ ವಾಜಿ (27), ತಂದೆ ಜಾಫರ್ ಖಾನ್, ಬಜಪೆ ನಿವಾಸಿಯನ್ನು ಬಂಧಿಸಲಾಗಿದೆ.
ವಿಚಾರಣೆಯಲ್ಲಿ, ಕಳವು ಮಾಡಿದ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ (40) ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಆತನನ್ನೂ ಬಂಧಿಸಲಾಗಿದೆ.
ಆರೋಪಿತರಿಂದ ಸುಮಾರು ₹1.95 ಲಕ್ಷ ಮೌಲ್ಯದ ಬೆಳ್ಳಿ ಮಂತ್ರದೇವತೆಯ ಮೂರ್ತಿ, ಕಡ್ಸಲೆ, ಕೊಡೆ, ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು, ಟಿವಿ ಮತ್ತು ಸೆಟ್‌ಟಾಪ್ ಬಾಕ್ಸ್, 2 ಮೊಬೈಲ್‌ಗಳು ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಸುಮಾರು ₹30 ಸಾವಿರ ಮೌಲ್ಯದ ಸ್ಕೂಟರ್ ಅನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ವಾಜೀದ್ ಜೆ @ ವಾಜಿ ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ಹಾಗೂ ಎಂಒಬಿ ದಾಖಲಾಗಿದ್ದು, ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಕೊಲೆಯತ್ನ, ದರೋಡೆ, ಮನೆಕಳ್ಳತನ, ವಾಹನ ಕಳ್ಳತನ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ದಿನಾಂಕ 28-01-2026ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.






