
ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲೆ ಕಳ್ಳನನ್ನು ಮಂಗಳೂರು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿತನಿಂದ ₹6,47,920 ಮೌಲ್ಯದ 46.28 ಗ್ರಾಂ ಚಿನ್ನಾಭರಣ ಹಾಗೂ ₹5,000 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜ.23ರಂದು ಸಂಜೆ ಬೆಂಗಳೂರಿಗೆ ತೆರಳಲು ಬಸ್‌ನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು ಹಾಗೂ ಹಿರಿಯ ನಾಗರಿಕರ ಟ್ರಾಲಿ ಬ್ಯಾಗ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಬ್ಯಾಗ್‌ನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ ₹20,000 ನಗದು ಹಣ ಇತ್ತು. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಗೆ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತನಿಖಾಧಿಕಾರಿ ವಿನಾಯಕ ತೊರಗಲ್ (ಪಿಎಸ್‌ಐ) ಹಾಗೂ ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ, ಸಿದ್ದು, ಹರೀಶ್, ನಿತೀಶ್ ಮತ್ತು ಗಾಲಿಬ್ ಕಾರ್ಯಾಚರಣೆ ನಡೆಸಿದರು. ಜ.28ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಮಹಮ್ಮದ್ ಇಮ್ರಾನ್ ಎನ್.ಎಂ. (44) ಎಂಬಾತನನ್ನು ಬಂಧಿಸಲಾಯಿತು. ಆತ ಕೊಡಗು ಜಿಲ್ಲೆಯ ಮಡಿಕೇರಿಯ ನಿವಾಸಿ.
ಬಂಧಿತನನ್ನು ಜ.29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ತನಿಖೆಯಲ್ಲಿ ಆರೋಪಿ ಬಸ್ ನಿಲ್ದಾಣಗಳಲ್ಲಿ ಬ್ಯಾಗ್ ಕಳ್ಳತನ ಮಾಡುವ ರೂಢಿಗತ ಅಪರಾಧಿಯಾಗಿದ್ದು, ಮಂಗಳೂರು, ಹಾಸನ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 11 ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಹಾಸನ ಜಿಲ್ಲೆಯ ಮನೆ ಕಳ್ಳತನ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಇರುವ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ವಾರೆಂಟ್ ಕೂಡ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
— ಪೊಲೀಸ್ ಆಯುಕ್ತರು, ಮಂಗಳೂರು ನಗರ






