
ರಾಜ್ಯದಲ್ಲಿ ಅನೈತಿಕ ಸಂಬಂಧ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಹಾಸನದಲ್ಲಿ ಇಂತಹದ್ದೇ ವಿಚಾರ ಕೊಲೆಯಲ್ಲಿ ಅಂತ್ಯಗೊಂಡಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಜ.28ರ ತಡರಾತ್ರಿ ಅಡುಗೆ ಗುತ್ತಿಗೆದಾರ ಆನಂದ್ (48) ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ನಗರ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯಾಗಿರುವ ಧರ್ಮೇಂದ್ರ ಎಂಬ ವ್ಯಕ್ತಿ, ಆನಂದ್ ಅವರಿಗೆ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಧರ್ಮೇಂದ್ರ ಆನಂದ್ ಮೇಲೆ ದಾಳಿ ನಡೆಸಿದ್ದಾನೆ. ಆನಂದ್ ಮತ್ತು ಧರ್ಮೇಂದ್ರ ಇಬ್ಬರೂ ಒಂದೇ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಷಯದ ಕುರಿತು ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿತ್ತು.
ಘಟನೆ ನಡೆದ ದಿನ ಇಬ್ಬರೂ ಬಾರ್‌ನಲ್ಲಿ ಭೇಟಿಯಾಗಿದ್ದು, ಮಹಿಳೆಯ ಸಂಬಂಧ ಕುರಿತು ಮಾತುಕತೆ ನಡೆದಿದೆ. ಬಳಿಕ ಆನಂದ್ ಮನೆಗೆ ತೆರಳಿದ್ದ. ನಂತರ ಧರ್ಮೇಂದ್ರ ಫೋನ್ ಮಾಡಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಆನಂದ್ ಮತ್ತೆ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮತ್ತೆ ಗಲಾಟೆ ನಡೆದಿದ್ದು, ಮಾತಿನ ಭರದಲ್ಲಿ ಧರ್ಮೇಂದ್ರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಧರ್ಮೇಂದ್ರ ಆ ಮಹಿಳೆಯೊಂದಿಗೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಮಧ್ಯದಲ್ಲಿ ಆ ಮಹಿಳೆಗೆ ಆನಂದ್ ಜೊತೆಯೂ ಸಂಬಂಧ ಆರಂಭವಾದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಗಂಭೀರ ಸಂಘರ್ಷ ಉಂಟಾಗಿತ್ತು. ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿ ಧರ್ಮೇಂದ್ರ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಬಳಿಕ ಆರೋಪಿ ಧರ್ಮೇಂದ್ರ ಪರಾರಿಯಾಗಿದ್ದು, ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.






