ಪುತ್ತೂರು: ಆನೆಮಜಲು ಪ್ರದೇಶದ 4.84 ಎಕರೆ ಜಾಗದಲ್ಲಿ ₹51.90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 12 ಹವಾನಿಯಂತ್ರಿತ ಕೋರ್ಟ್ ಹಾಲ್‌ಗಳನ್ನು ಒಳಗೊಂಡ ನೂತನ ಪುತ್ತೂರು ನ್ಯಾಯಾಲಯ ಸಂಕೀರ್ಣವು ಜ.31ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ. ಮಧ್ಯಾಹ್ನ 2.45ರಿಂದ ನ್ಯಾಯಾಲಯದ ಕಲಾಪಗಳು ಹೊಸ ಸಂಕೀರ್ಣದಲ್ಲಿ ಆರಂಭಗೊಳ್ಳಲಿವೆ ಎಂದು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಜಿ. ಮಾತನಾಡಿ ಆಂಧ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಉದ್ಘಾಟಿಸಲಿದ್ದು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿಭು ಬಬ್ರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ನೂತನ ಕೋರ್ಟ್ ಸಂಕೀರ್ಣದ ನೆಲ ಮಹಡಿ 1200 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಮೇಲಿನ ಮೂರು ಮಹಡಿಗಳು ತಲಾ 3115 ಚದರ ಅಡಿ ವಿಸ್ತೀರ್ಣದಲ್ಲಿವೆ ಎಂದರು. ನೆಲ ಮಹಡಿಯಲ್ಲಿ ಅಂಚೆ ಕಚೇರಿ, ಬ್ಯಾಂಕ್, ಎಟಿಎಂ ಸೇರಿದಂತೆ ಅಗತ್ಯ ಸೌಲಭ್ಯಗಳಿವೆ.
ಪ್ರಥಮ ಮಹಡಿಯಲ್ಲಿ 4 ಕೋರ್ಟ್ ಹಾಲ್, 4 ನ್ಯಾಯಾಧೀಶರ ಕಚೇರಿ, ಮಿನಿ ಕೋರ್ಟ್ ಹಾಲ್, ದಾಖಲೆ ಕೊಠಡಿ ಹಾಗೂ ಲಿಫ್ಟ್ ವ್ಯವಸ್ಥೆ ಇದೆ. ಎರಡನೇ ಮಹಡಿಯಲ್ಲಿ 4 ಕೋರ್ಟ್ ಹಾಲ್, ನ್ಯಾಯಾಧೀಶರ ಕಚೇರಿಗಳು, ನ್ಯಾಯಾಧೀಶರ ಗ್ರಂಥಾಲಯ, ಕಂಪ್ಯೂಟರ್ ರೂಮ್, ಎಪಿಪಿ ಕಚೇರಿ ಹಾಗೂ ಹಾಲ್‌ಗಳಿವೆ. ಮೂರನೇ ಮಹಡಿಯಲ್ಲಿ 4 ಕೋರ್ಟ್ ಹಾಲ್, ನ್ಯಾಯಾಧೀಶರ ಕಚೇರಿ, ಎಜಿಪಿ ಕಚೇರಿ, ಕಾನ್ಫರೆನ್ಸ್ ಹಾಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪೋಕೋ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ವಿಶೇಷ ಪೋಕೋ ನ್ಯಾಯಾಲಯ ಮಂಜೂರಾಗಿದ್ದು, ಶೀಘ್ರದಲ್ಲೇ ನ್ಯಾಯಾಧೀಶರ ನೇಮಕವಾಗಿ ಕಾರ್ಯಾರಂಭಗೊಳ್ಳಲಿದೆ ಎಂದು ಜಗನ್ನಾಥ ರೈ ಜಿ. ಹೇಳಿದರು. ಹೆಚ್ಚುವರಿ 6 ಕೋರ್ಟ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಳಿಗೆ ವೇಗ ನೀಡಲಾಗುವುದು ಎಂದರು.
ನ್ಯಾಯಾಲಯ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಂಗ ದ.ಕ., ಲೋಕೋಪಯೋಗಿ ಇಲಾಖೆ ದ.ಕ. ಹಾಗೂ ಪುತ್ತೂರು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.  ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್, ಅಶೋಕ್ ಎಸ್. ಕಿಣಗಿ, ಎಸ್. ವಿಶ್ವಜೀತ್ ಶೆಟ್ಟಿ, ರಾಜೇಶ್ ರೈ ಕೆ., ತ್ಯಾಗರಾಜ್ ಎನ್. ಇನವಳ್ಳಿ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,ದ.ಕ.ಸಂಸದ ಕ್ಯಾಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಸರ್ವೋಚ್ಚನ್ಯಾಯಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್ ಕುಮಾರ್, ರಾಜ್ಯ ಸರಕಾರದ ಆಡೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ದ.ಕ.ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ. ಹೆಗ್ಡೆ ಭಾಗವಹಿಸಲಿದ್ದಾರೆ ಎಂದರು. ನೂತನ ಕೋಟ್ ಲಿಫ್ಟ್ರ್ ನಲ್ಲಿ ಕಲಾಪಗಳು ಆರಂಭಗೊಂಡ ಬಳಿಕ ಈಗಿರುವ ಹಳೆಯ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅವರು ಹೇಳಿದರು.


ನ್ಯಾಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ “ಬೆನಗಲ್ ನರಸಿಂಗ್ ರಾವ್ ಸಂವಿಧಾನ ಪಥ” ಎಂದು ನಾಮಕರಣ ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಕಾರ್ಯಕ್ರಮದಲ್ಲಿ ಇದರ ಘೋಷಣೆ ನಡೆಯಲಿದೆ ಎಂದು ತಿಳಿಸಿದರು.
ವಕೀಲರ ಅಧ್ಯಯನಕ್ಕಾಗಿ ಕೋರ್ಟ್ ಸಮೀಪದಲ್ಲಿ ಗ್ರಂಥಾಲಯ ಆರಂಭಿಸಲಾಗುತ್ತಿದ್ದು, ಕೋರ್ಟ್ ಉದ್ಘಾಟನೆಯ ಬಳಿಕ ಆಂಧ್ರಪ್ರದೇಶದ ರಾಜ್ಯಪಾಲ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ ಎಂದರು.
ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಕಣಿ ಮಾತನಾಡಿ, ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ನ್ಯಾಯಾಲಯ ಮಹತ್ವದ ಪಾತ್ರ ವಹಿಸಿದೆ. ನೂತನ ಕೋರ್ಟ್ ಸಂಕೀರ್ಣದಿಂದ ಆನೆಮಜಲು ಹಾಗೂ ಪುತ್ತೂರು ಪೇಟೆ ವ್ಯಾಪ್ತಿಯ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸರಿತಾ ಡಿ., ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್., ಪ್ರಕೃತಿ ಕಲ್ಯಾಣಪುರ, ದೇವರಾಜ್, ವಕೀಲರ ಸಂಘ ಉಪಾಧ್ಯಕ್ಷ ಮೋನಪ್ಪ ಎಂ., ಕೋಶಾಧಿಕಾರಿ ಮಹೇಶ್ ಸವಣೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!