
ಪುತ್ತೂರು: ಕಳೆದ 50 ವರ್ಷಗಳಿಂದ ಪುತ್ತೂರಿನಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ನೆಲ್ಲಿಕಟ್ಟೆ ಮಿತ್ರಮಂಡಳಿಯ ಸುವರ್ಣ ಸಂಭ್ರಮ ಕಾರ್ಯಕ್ರಮ ಫೆಬ್ರವರಿ 1ರಂದು ನಡೆಯಲಿದೆ ಎಂದು ಮಿತ್ರಮಂಡಳಿಯ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಸಂಭ್ರಮದ ಅಂಗವಾಗಿ ಈಗಾಗಲೇ ರಕ್ತದಾನ ಶಿಬಿರ ಹಾಗೂ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಫೆ.1ರಂದು ಮಧ್ಯಾಹ್ನ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ ಉದ್ಘಾಟಿಸಲಿದ್ದು, ಗೌರವಾಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ರೈ, ಸಂಸದ ಬ್ರಿಜೇಶ್ ಚೌಟ, ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧ್ಯಕ್ಷ ಹರೀಶ್ ಇಂಜಾಡಿ, ಉಪ್ಪಿನಂಗಡಿ ದೇವಾಲಯದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಜಿ.ಎಲ್. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ನಿರ್ದೇಶಕ ನವೀನ್ ಭಂಡಾರಿ, ಉದ್ಯಮಿಗಳಾದ ಶಿವರಾಮ ಆಳ್ವ, ಮಹಮ್ಮದ್ ಇಬ್ರಾಹಿಂ ಹಾಗೂ ಉಜ್ವಲ್ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಯಮಿ ಸಿದ್ದನಾಥ್ ಎಸ್.ಕೆ., ಕೋಟಿಚೆನ್ನಯ್ಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಎನ್., ಉದ್ಯಮಿ ರೋಶನ್ ರೈ, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಜೋಕಿಂ ಡಿಸೋಜ ಹಾಗೂ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಜೀವ ರಕ್ಷಕ ಈಶ್ವರ್ ಮಲ್ಪೆ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಅಜಯ್ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ ನಿವೃತ್ತ ಶಿಕ್ಷಕಿ ಮೀನಾಕ್ಷಿ, ನಿವೃತ್ತ ಅಂಗನವಾಡಿ ಪರಿಚಾರಕಿ ಕುಸುಮಕ್ಕ, ಸ್ಮಶಾನ ಪಾಲಕ ಸತೀಶ್ ಮಡಿವಾಳ, ನಿವೃತ್ತ ಸೈನಿಕರಾದ ಜೋ ಡಿಸೋಜ, ನರಸಿಂಹ ಭಂಡಾರ್ಕರ್, ಕುಶಾಲಪ್ಪ ಗೌಡ ಮತ್ತು ಎಡ್ವರ್ಡ್ ಡಿಸೋಜ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದು ಜಗದೀಶ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಿತ್ರಮಂಡಳಿಯ ಸ್ಥಾಪಕಾಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ಶೆಟ್ಟಿ, ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬೀಚ್ ರೆಸ್ಲಿಂಗ್ ಕಮಿಟಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ನೆಲ್ಲಿಕಟ್ಟೆ ಹಾಗೂ ಉದ್ಯಮಿ ಸಂದೀಪ್ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.






