
ಮಂಗಳೂರು: ಕಬ್ಬಿಣದ ರಾಡ್ ಎದೆಯೊಳಗೆ ತೂರಿ ತೀರ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡಿನ 11 ವರ್ಷದ ಬಾಲಕಿಯನ್ನು ಕೆಎಂಸಿ ಆಸ್ಪತ್ರೆ ಮಂಗಳೂರು ವೈದ್ಯರ ತಂಡ ಯಶಸ್ವಿಯಾಗಿ ರಕ್ಷಿಸಿದೆ.
ಜನವರಿ 18ರಂದು ಬಾಲಕಿ (ಹೆಸರು ಬದಲಾಯಿಸಲಾಗಿದೆ) ಆಟವಾಡುವ ವೇಳೆ ಆಕಸ್ಮಿಕವಾಗಿ ಕಬ್ಬಿಣದ ರಾಡ್ ಮೇಲೆ ಬಿದ್ದು ಗಾಯಗೊಂಡಿದ್ದಾಳೆ. ರಾಡ್ ಬಾಲಕಿಯ ಎದೆಯ ಬಲಭಾಗದಿಂದ ಒಳಹೊಕ್ಕು ಹಿಂಬದಿಯಿಂದ ಹೊರಬಂದಿತ್ತು. ತಕ್ಷಣ ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು.
ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞೆ ಡಾ. ಅರ್ಪಿತಾ ಹಾಗೂ ತಂಡ ಬಾಲಕಿಯ ಸ್ಥಿತಿಯನ್ನು ಸ್ಥಿರಗೊಳಿಸಿ ತಕ್ಷಣ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿ
ಬಾಲಕಿಗೆ ‘ಥೊರಾಕೋಟಮಿ’ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಸದಾಶಿವ್‌ರಾವ್, ಅರವಳಿಕೆ ತಜ್ಞರಾದ ಡಾ. ಸುನೀಲ್ ಹಾಗೂ ಡಾ. ಫ್ರೀಡಾ ಕುಟಿನ್ಹಾ ಅವರ ಸಹಕಾರದೊಂದಿಗೆ ಎದೆಯೊಳಗೆ ತೂರಿದ್ದ ಕಬ್ಬಿಣದ ರಾಡ್‌ನ್ನು ಸುರಕ್ಷಿತವಾಗಿ ಹೊರತೆಗೆದರು.
ಶಸ್ತ್ರಚಿಕಿತ್ಸೆಯ ಬಳಿಕ ಬಾಲಕಿಯನ್ನು ಮಕ್ಕಳ ತೀವ್ರ ಆರೈಕೆ ಘಟಕಕ್ಕೆ ಸ್ಥಳಾಂತರಿಸಿ ನಿಗಾದಲ್ಲಿ ಇರಿಸಲಾಯಿತು. ಪಿಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ. ಸ್ವಾತಿ ರಾವ್ ಅವರ ಆರೈಕೆಯಲ್ಲಿ ಬಾಲಕಿ ವೇಗವಾಗಿ ಚೇತರಿಸಿಕೊಂಡಿದ್ದು, ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಜೀವಕ್ಕೆ ಅಪಾಯಕಾರಿಯಾದ ಗಾಯಗಳು – ತಜ್ಞರ ಎಚ್ಚರಿಕೆ
ಈ ಕುರಿತು ಮಾತನಾಡಿದ ಡಾ. ಸದಾಶಿವ್‌ರಾವ್, “ಮಕ್ಕಳಲ್ಲಿ ಇಂತಹ ಗಾಯಗಳು ಅಪರೂಪವಾದರೂ ಜೀವಕ್ಕೆ ಅತ್ಯಂತ ಅಪಾಯಕಾರಿ. ಚಾಕು, ಕಬ್ಬಿಣದ ರಾಡ್‌ನಂತಹ ವಸ್ತುಗಳು ಎದೆಯೊಳಗೆ ತೂರಿದ ಸಂದರ್ಭದಲ್ಲಿ ಅವನ್ನು ತಜ್ಞ ವೈದ್ಯರು ಹಾಗೂ ಸಂಪೂರ್ಣ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಮಾತ್ರ ಹೊರತೆಗೆಯಬೇಕು,” ಎಂದರು. ಈ ಪ್ರಕರಣದಲ್ಲಿ ರಾಡ್‌ನ್ನು ಹೊರತೆಗೆಯುವ ಮೊದಲು ಹೆಚ್ಚುವರಿ ಭಾಗವನ್ನು ಕತ್ತರಿಸುವ ಅಗತ್ಯವೂ ಎದುರಾಯಿತು ಎಂದು ವಿವರಿಸಿದರು.
ಸ್ಥಳೀಯ ಆರೋಗ್ಯ ಕೇಂದ್ರದ ಪಾತ್ರ ಶ್ಲಾಘನೀಯ
ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, “ಈ ಪ್ರಕರಣವು ಮಕ್ಕಳ ತುರ್ತು ಆರೈಕೆಯಲ್ಲಿ ಕೆಎಂಸಿ ಆಸ್ಪತ್ರೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೀವ ಉಳಿಸುವಲ್ಲಿ ಸ್ಥಳೀಯ ಆರೋಗ್ಯ ಕೇಂದ್ರವು ಪ್ರಾಥಮಿಕ ಚಿಕಿತ್ಸೆ ನೀಡಿ ಸಮಯಕ್ಕೆ ಸರಿಯಾಗಿ ರವಾನಿಸಿರುವುದು ಶ್ಲಾಘನೀಯ,” ಎಂದರು






