ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ತನಿಖೆಗೆ ಆದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿದಾರರೊಬ್ಬರಿಗೆ ₹10 ಲಕ್ಷ ದಂಡ ಹಾಕುವುದಾಗಿ ಎಚ್ಚರಿಸಿದ ಹೈಕೋರ್ಟ್‌ ಅವರ ಅರ್ಜಿ ವಜಾಗೊಳಿಸಿದೆ.

ಈ ಸಂಬಂಧ ನೇಲೋಗಿಯ ‘ಭ್ರಷ್ಟಾಚಾರ ವಿರೋಧ ಪಕ್ಷ’ದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಈ. ಹೂಗಾರ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ‘ಈ ಅರ್ಜಿಯಲ್ಲಿ ಹುರುಳಿಲ್ಲ. ಅರ್ಜಿದಾರರು ವಜಾಗೊಂಡ ಕೆಪಿಟಿಸಿಎಲ್‌ (ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ) ನೌಕರ ಎಂಬ ಕಾರಣಕ್ಕೆ ಸುಮ್ಮನೇ ಬಿಡುತ್ತಿದ್ದೇನೆ. ಇಲ್ಲವಾದಲ್ಲಿ ₹10 ಲಕ್ಷ ದಂಡ ವಿಧಿಸುತ್ತಿದ್ದೆ’ ಎಂದು ಎಚ್ಚರಿಸಿದರು.

ಕೋರಿಕೆ ಏನು?: ‘ಸಿದ್ದರಾಮಯ್ಯ ಶಿವಕುಮಾರ್ ಅಲ್ಲದೆ ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್‌ ಸಿಂಗ್‌ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಕೆಪಿಟಿಸಿಎಲ್‌ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿದಂತೆ ಒಟ್ಟು 51 ಜನರ ವಿರುದ್ಧ ತಕ್ಷಣವೇ ಸಿಬಿಐ ಎನ್‌ಐಎ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ತುರ್ತು ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು. ‘ಪ್ರತಿವಾದಿಗಳು ಭಾರತೀಯ ಸಂವಿಧಾವನವನ್ನು ಅವಮಾನಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರವೂ ಅಡಕವಾಗಿದೆ. ಆದ್ದರಿಂದ ಇವರೆಲ್ಲಾ ಪಡೆಯುತ್ತಿರುವ ಸಂಬಳ ಸಂಬಳದ ಪ್ರಯೋಜನ ಪಿಂಚಣಿ ಇತ್ಯಾದಿಗಳನ್ನು ಕ್ರಿಮಿನಲ್‌ ಅಪರಾಧ ಕೃತ್ಯದಡಿ ಪರಿಗಣಿಸಿ ಕಾನೂನು ಕ್ರಮಕ್ಕೆ ಆದೇಶಿಸಬೇಕು’ ಎಂದು ಕೋರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!