
ಮುಖಕ್ಕೆ ಮಾಸ್ಕ್ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಟೂರ್ಸ್ ಆಯಂಡ್ ಟ್ರಾವೆಲ್ಸ್ ಮಾಲೀಕನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಸೋಲದೇವನಹಳ್ಳಿ ನಿವಾಸಿ ಡಿ.ರಾಜಾ (43) ಎಂಬಾತನನ್ನು ಬಂಧಿಸಿ, ₹1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಅಲ್ಲದೆ, ಈತನ ಬಂಧನದಿಂದ ನಗರದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
‘ದಾವಣಗೆರೆ ಹಾಗೂ ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರಾಜಾ, ಕೆಲ ವರ್ಷಗಳಿಂದ ಸೋಲದೇವನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾನೆ. ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಈತ, ಕೊರೊನಾ ವೇಳೆ ಟ್ರಾವೆಲ್ಸ್‌ನಲ್ಲಿ ಭಾರಿ ನಷ್ಟ ಉಂಟಾಗಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ನಾಲ್ಕು ವರ್ಷಗಳಿಂದ ನಗರದಲ್ಲಿ ಆಟೊ ಚಾಲನೆ ಮಾಡಿಕೊಂಡಿದ್ದ. ಆದರೆ, ತನ್ನ ದುಶ್ಚಟಗಳಿಗೆ ಹಣ ಹೊಂದಿಸಲು ಕಳೆದೊಂದು ವರ್ಷದಿಂದ ಕಳ್ಳತನ ಹಾದಿ ಹಿಡಿದಿದ್ದ’ ಎಂದು ಪೊಲೀಸರು ತಿಳಿಸಿದರು.
ಎನ್‌ಜಿಇಎಫ್ ಲೇಔಟ್ ನಿವಾಸಿ, ಹೋಟೆಲ್ ಉದ್ಯಮಿ ಉದಯನಾಯಕ್ ಅವರು 2025ರ ಅಕ್ಟೋಬರ್ 18ರಂದು ಕುಂದಾಪುರಕ್ಕೆ ಕುಟುಂಬ ಸಮೇತ ಹೋಗಿದ್ದರು. ಅವರು ವಾಪಸ್ ಬಂದಾಗ ಮನೆ ಬಾಗಿಲನ್ನು ಮೀಟಿ, ಯಾರೋ ಒಳಗೆ ಹೋಗಿದ್ದರು. ಕೊಠಡಿಯ ಬೀರುವಿನಲ್ಲಿದ್ದ ಸುಮಾರು 783 ಗ್ರಾಂ ಚಿನ್ನಾಭರಣಗಳು ಹಾಗೂ ₹8 ಲಕ್ಷ ನಗದು ಕಳವಾಗಿದ್ದವು. ಈ ಬಗ್ಗೆ ಅವರು ದೂರು ನೀಡಿದ್ದರು ಎಂದರು







