
ಅಡೂರು/ಕಾಸರಗೋಡು: ತುಳು ಮತ್ತು ಮಲಯಾಳಂ ಭಾಷೆಯಲ್ಲಿ ವಿಡಿಯೊಗಳ ಮೂಲಕ ಜನಪ್ರಿಯತೆ ಪಡೆದಿದ್ದ ಕಾಸರಗೋಡಿನ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಾಪು (24) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ಕೇರಳದ ಆಡೂರು ಪ್ರದೇಶದವರಾದ ಚಿನ್ನು ಪಾಪು ಅವರ ನಿಜ ಹೆಸರು ಕೆ. ರೇಷ್ಮಾ. ಅವರು ಕಾಸರಗೋಡು ಸಮೀಪ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಮಧ್ಯಾಹ್ನ ವೇಳೆಗೆ ತಮ್ಮ ವಾಸಸ್ಥಳದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಒಂದು ತಿಂಗಳ ಹಿಂದೆ ವಿಚ್ಛೇದನ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ವೈಯಕ್ತಿಕ ಕಾರಣಗಳು ಈ ಘಟನೆಗೆ ಸಂಬಂಧವಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ. ಮೃತರಿಗೆ ನಾಲ್ಕು ವರ್ಷದ ಮಗನಿದ್ದಾನೆ.
ಸಾವಿನ ನಿಖರ ಕಾರಣ ತಿಳಿಯಲು ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.







