ಮಂಗಳೂರು: ಮ್ಯಾಟ್ರಿಮೋನಿ ಆನ್‌ಲೈನ್ ವೇದಿಕೆಯ ಮೂಲಕ ಪರಿಚಯ ಮಾಡಿಕೊಂಡ ಮಹಿಳೆಯನ್ನು ಮದುವೆಯಾಗಿದ್ದು, ನಂತರ ಹಂತ ಹಂತವಾಗಿ ₹6.60 ಲಕ್ಷ ಹಣ ಪಡೆದು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸುಶಾಂತ್ ಪೂಜಾರಿ (32) ಎಂಬಾತನು ಆನ್‌ಲೈನ್ ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್ ಮೂಲಕ ಮಹಿಳೆಯೊಂದಿಗೆ ಪರಿಚಯ ಬೆಳೆಸಿ, 02-02-2025ರಂದು ಮಹಾರಾಷ್ಟ್ರದ ನವ ಮುಂಬೈನ ಘನಸೋಳಿಯಲ್ಲಿ ಮದುವೆಯಾಗಿದ್ದನು. ಬಳಿಕ ವಿವಿಧ ನೆಪಗಳಲ್ಲಿ ಹಣ ಪಡೆದುಕೊಂಡು 15-11-2025ರಂದು ನಾಪತ್ತೆಯಾಗಿದ್ದಾನೆ. ಅನುಮಾನಗೊಂಡ ಮಹಿಳೆ ವಿಚಾರಣೆ ನಡೆಸಿದಾಗ, ಇದೇ ರೀತಿಯಲ್ಲಿ ಹಲವರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಹಾಗೂ ಈತನಿಗೆ ಮುಂಚೆಯೇ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಕ್ರಂ ಸಂಖ್ಯೆ 184/2025ರಡಿ ಬಿ.ಎನ್‌.ಎಸ್.ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ತನಿಖೆ ನಡೆಸಿದ ಪೊಲೀಸರು 05-02-2026ರಂದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದರು. ವಿಚಾರಣೆಯಲ್ಲಿ ಆತನು 2021ರಲ್ಲಿ ಉಡುಪಿಯ ಯುವತಿಯನ್ನು ಮದುವೆಯಾಗಿದ್ದು, ಉಡುಪಿ, ಮುಂಬೈ, ಬೆಂಗಳೂರು ಹಾಗೂ ಕಾರ್ಕಳ ಭಾಗಗಳ ಹಲವಾರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನನ್ನೂ ಬಂಧಿಸಲಾಗಿದೆ. ಈತನು ಸುಶಾಂತ್ ತನ್ನ ಅಳಿಯ ಎಂದು ಹೇಳಿಕೊಂಡು, ಮದುವೆ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಮಹಿಳೆ ಹಾಗೂ ಕುಟುಂಬಸ್ಥರನ್ನು ನಂಬಿಸುವಲ್ಲಿ ಸಹಕರಿಸಿದ್ದಾನೆ ಎನ್ನಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿತ ಸುಶಾಂತ್ ಪೂಜಾರಿ ವಿರುದ್ಧ ಮಂಗಳೂರು ಊರ್ವಾ, ಉಡುಪಿ ಕೋಟಾ ಹಾಗೂ ಮಹಾರಾಷ್ಟ್ರದ ಅರ್ನಾಳ್ ಪೊಲೀಸ್ ಠಾಣೆಗಳಲ್ಲಿ ವಂಚನೆ, ಕಳವು ಸೇರಿದಂತೆ ವಿವಿಧ ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!