ಅ ಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 13ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಪ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯ ಟೈ ಆಗಿ ಸೂಪರ್ ಓವರ್ ನಡೆಯಿತು. ಸೂಪರ್ ಓವರ್ ಸಹ ಟೈ ಆದ ಕಾರಣ ಮತ್ತೊಂದು ಸೂಪರ್ ಓವರ್ ನಡೆದಿದ್ದು, ದಕ್ಷಿಣ ಆಫ್ರಿಕಾ ಕೊನೆಗೆ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ ಅಫ್ಘಾನಿಸ್ತಾನಕ್ಕೆ 188 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್ ಗಳಿಸಿ ಆಲ್‌ಔಟ್ ಆಯಿತು. ಈ ಮೂಲಕ ಪಂದ್ಯ ಟೈ ಆದ ಕಾರಣ ಟೂರ್ನಿಯ ಮೊದಲ ಸೂಪರ್ ಓವರ್ ನಡೆಯಿತು.

ಮೊದಲ ಸೂಪರ್ ಓವರ್: ಅಪ್ಘಾನಿಸ್ತಾನ ಪರ ಅಜ್ಮತ್ ಒಮರ್ಝೈ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿದ ಸಹಾಯದಿಂದ 6 ಎಸೆತಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 17 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 18 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಡಿವಾಲ್ಡ್ ಬ್ರೆವಿಸ್ ಒಂದು ಸಿಕ್ಸರ್ ಹಾಗೂ ಕೊನೆಯ ಎಸೆತದಲ್ಲಿ ಗೆಲ್ಲಲು 7 ರನ್ ಬೇಕಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಸಿಕ್ಸರ್ ಬಾರಿಸಿದ ಕಾರಣ ತಂಡ 17 ರನ್ ಕಲೆಹಾಕಿ ಸೂಪರ್ ಓವರ್ ಸಹ ಟೈ ಆಯಿತು.

ಎರಡನೇ ಸೂಪರ್ ಓವರ್: ಮೊದಲ ರೋಚಕ ಸೂಪರ್ ಓವರ್‌ ಮುಗಿದ ನಂತರ ಎರಡನೇ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ 23 ರನ್ ಬಾರಿಸಿತು. ಟ್ರಿಸ್ಟನ್ ಸ್ಟಬ್ಸ್ ಒಂದು ಸಿಕ್ಸರ್, ಎರಡು ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ ಎರಡು ರನ್, ಸತತ ಎರಡು ಸಿಕ್ಸರ್ ಹಾಗೂ ಕೊನೆ ಎಸೆತದಲ್ಲಿ ಎರಡು ರನ್ ಬಾರಿಸಿದರು. ಅಫ್ಘಾನಿಸ್ತಾನಕ್ಕೆ 24 ರನ್ ಗುರಿ ಸಿಕ್ಕಿತು. ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಅಫ್ಘಾನಿಸ್ತಾನದ ಪರ ನಬಿ ಮೊದಲ ಎಸೆತದಲ್ಲಿ ಯಾವುದೇ ರನ್ ಬಾರಿಸದೇ ಎರಡನೇ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಬಳಿಕ ಗುರ್ಬಜ್ ಸತತ ಮೂರು ಸಿಕ್ಸರ್ ಬಾರಿಸಿದರು. ಅಲ್ಲಿಗೆ ಕೊನೆಯ ಎಸೆತಕ್ಕೆ 6 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಸಮಯದಲ್ಲಿ ಕೇಶವ್ ಮಹಾರಾಜ್ ವೈಡ್ ಬಾಲ್ ಹಾಕಿದ ಕಾರಣ ಕೊನೆಯ ಎಸೆತಕ್ಕೆ 5 ರನ್ ಬೇಕಿತ್ತು. ಆದರೆ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ್ದ ಗುರ್ಬಜ್ ಕ್ಯಾಚ್ ನೀಡಿ ಅಫ್ಘಾನಿಸ್ತಾನ 4 ರನ್‌ಗಳ ಸೋಲನ್ನು ಕಂಡಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!