
ತುರುವೇಕೆರೆ ತಾಲೂಕಿನ ಬಿಇಒ ಕಚೇರಿಯಲ್ಲಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮೀ ಅವರನ್ನು ಆಕೆಯ ಸಾಕು ಮಗ ಮತ್ತು ಸಹೋದರಿಯೇ ಕೊಲೆ ಮಾಡಿರುವ ಘಟನೆ ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳಾದ ಅನುಸೂಯಾ ಮತ್ತು ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಯಲಕ್ಷ್ಮೀ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಎಲ್ಲರನ್ನೂ ನಂಬಿಸಲು ಆರೋಪಿಗಳು ಯತ್ನಿಸಿದ್ದರು. ಆದರೆ ಜಯಲಕ್ಷ್ಮೀ ಸಾವಿನ ಬಗ್ಗೆ ಅನುಮಾನಗೊಂಡ ಶ್ರೀನಿವಾಸ್ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯ ಬಯಲಾಗಿದೆ. ಅಂತ್ಯಕ್ರಿಯೆಗೆ ಸಿದ್ಧಗೊಂಡಿದ್ದ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದರು.
ತನಿಖೆ ವೇಳೆ ಜಯಲಕ್ಷ್ಮೀ ಜೊತೆ ವಾಸಿಸುತ್ತಿದ್ದ ಸಾಕು ಮಗ ಚಂದ್ರಶೇಖರ್ ಹಾಗೂ ಸಹೋದರಿ ಅನುಸೂಯಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಡರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಹಿರಂಗವಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಗಂಡನನ್ನು ಕಳೆದುಕೊಂಡಿದ್ದ ಜಯಲಕ್ಷ್ಮೀ ಕಳೆದ 20 ವರ್ಷಗಳಿಂದ ಶ್ರೀನಿವಾಸ್ ಜೊತೆ ಆತ್ಮೀಯತೆಯಿಂದ ವಾಸಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ಅನುಸೂಯಾ ಮಗ ಚಂದ್ರಶೇಖರ್ ಅನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಎಂಟು ತಿಂಗಳ ಹಿಂದೆ ಅನುಸೂಯಾ ಮತ್ತು ಚಂದ್ರಶೇಖರ್ ಜೋಗಿಹಳ್ಳಿಯ ನಿವಾಸಕ್ಕೆ ಬಂದು, ಶ್ರೀನಿವಾಸ್ ಮನೆ ಬಿಡುವಂತೆ ಒತ್ತಡ ಹೇರಿದ್ದರು.
ಇತ್ತೀಚೆಗೆ ಜಯಲಕ್ಷ್ಮೀ ತುರುವೇಕೆರೆಯಲ್ಲಿ ಮನೆ ಮಾಡಿಕೊಳ್ಳಲು ನಿರ್ಧರಿಸಿ ಬಾಡಿಗೆ ಮನೆಗೆ ಅಡ್ವಾನ್ಸ್ ನೀಡಿದ್ದರು. ಈ ವಿಚಾರ ತಿಳಿದ ಆರೋಪಿಗಳು ಆಕ್ರೋಶಗೊಂಡು ಕೊಲೆಗೈದಿರಬಹುದೆಂದು ತನಿಖೆ ಹೇಳುತ್ತಿದೆ. ಆರ್ಥಿಕ ಲಾಭ ಮತ್ತು ಅನುಕಂಪದ ಆಧಾರಿತ ಸರ್ಕಾರಿ ನೌಕರಿ ಉದ್ದೇಶವೂ ಕಾರಣವಾಗಿರಬಹುದೆಂಬ ಅನುಮಾನ ಮೂಡಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.







