
ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಪಿಲಿಪಂಜರ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ‘ಕೋಳಿ ಅಂಕ’ ಜುಗಾರಿ ಮೇಲೆ ವೇಣೂರು ಪೊಲೀಸರು ದಾಳಿ ನಡೆಸಿ ಕೋಳಿಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಅಕ್ಷಯ ಡವಗಿ ಅವರು ಮಂಗಳವಾರ (ಮಾ. 3) ಮಧ್ಯಾಹ್ನ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಕೊಕ್ರಾಡಿ–ಎಳಂಬ ಸಾರ್ವಜನಿಕ ರಸ್ತೆ ಬದಿಯ ಗುಡ್ಡ ಪ್ರದೇಶದಲ್ಲಿ ಸುಮಾರು 7–8 ಮಂದಿ ಗುಂಪು ಸೇರಿ ಜುಗಾರಿ ಆಟವಾಡುತ್ತಿರುವುದು ಕಂಡುಬಂದಿತು. ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಆರೋಪಿತರು ಓಡಿ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಕಟ್ಟಿ ಹಾಕಿದ್ದ ಮೂರು ಹುಂಜ ಕೋಳಿಗಳು ಹಾಗೂ ರೂ. 2,100 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾದವರಲ್ಲಿ ಪ್ರಕಾಶ ಪೆರ್ಮುಡ, ಸಂಜೀವ ಕುತ್ಲೂರು, ಸುರೇಶ್ ಕುತ್ಲೂರು, ಸೇಸಪ್ಪ ಶೆಟ್ಟಿ ಸುಲ್ಕೇರಿ, ಜಯಚಂದ್ರ ರೈ ಕುತ್ಲೂರು ಸೇರಿದಂತೆ ಇತರ ಮೂವರು ಇದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 17/2026 ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ, 1960ರ ಕಲಂ 3, 11ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.








